ಶಿವಮೊಗ್ಗ : 35 ರೂ. ಸ್ಯಾನಿಟೈಸರ್ ಗೆ 150 ರೂ. ದುಡ್ಡು ಹಾಕಿ ಹಣ ಹೊಡೆಯುವ ಕೆಲಸವನ್ನು ಮಾಡುತ್ತಾ ಬಿಜೆಪಿ ಸರ್ಕಾರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಹಣ ಹೊಡೆಯಲು, ಕೊರೊನಾ ಒಂದು ದಾರಿಯಾಗಿದೆ ಎಂದು ನೇರವಾಗಿ ಆಪಾದಿಸಿದ್ದಾರೆ. ಯಾವುದೇ ಕಾಮಗಾರಿಗೂ, ಯಾವುದೇ ಯೋಜನೆಗೂ ಟೆಂಡರ್ ಕರೆಯದೇ, ಹಣ ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಶಂಕುಸ್ಥಾಪನೆ, ಉದ್ಘಾಟನೆಗಳಿಗೆ ಸಮಸ್ಯೆ ಇಲ್ಲ. ಆದ್ರೆ, ಕಾಮಗಾರಿ ಟೆಂಡರ್ ಬಗ್ಗೆ ಸಭೆ ಕರೆಯಲು ಮತ್ತು ಸಮಿತಿ ಸಭೆ ಕರೆಯಲು, ಕೊರೊನಾ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಬಿಜೆಪಿಯವರು ವಿರೋಧ ಪಕ್ಷಕ್ಕಷ್ಟೇ ಲಾಯಕ್ಕು. ಅವರಿಗೆ ಅಧಿಕಾರ ನಡೆಸಲು ಬರುವುದಿಲ್ಲ ಎಂದು ಮೂದಲಿಸಿದ್ದಾರೆ. ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಜನರು ಬೀದಿ ಬೀದಿಯಲ್ಲಿ ಬಿದ್ದು ನರಳಾಡುತ್ತಿದ್ದಾರೆ. ಹೀಗಿದ್ದರೂ ಕೊರೊನಾ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಇದೆಯೋ ಇಲ್ಲವೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಬ್ಬರೇ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಉಳಿದ ಸಚಿವರು ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಇಂತಹದ್ದಕ್ಕೆ 1,700 ಕೋಟಿ ಖರ್ಚು ಮಾಡಿ 17 ಶಾಸಕರನ್ನು ಖರೀದಿ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ಕಿಮ್ಮನೆ ಪ್ರಶ್ನಿಸಿದ್ದಾರೆ.