Wednesday, January 15, 2025

ಸಚಿನ್ ಗೆ ಸೆಡ್ಡುಹೊಡೆದ ಕನ್ನಡಿಗ ರಾಹುಲ್ ದ್ರಾವಿಡ್ !

ಕನ್ನಡಿಗ ರಾಹುಲ್ ದ್ರಾವಿಡ್ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಸೆಡ್ಡು ಹೊಡೆದಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ದ್ರಾವಿಡ್ಡೇ ದಿ ಬೆಸ್ಟ್ ಅಂತ ಜನ ಮತಹಾಕಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರಿಗಿಂತ ದ್ರಾವಿಡ್ ಹೆಚ್ಚು ಮತ ಪಡೆದುಕೊಂಡಿದ್ದಾರೆ.

ಹೌದು,  ಕ್ರಿಕೆಟನ್ನು ಜಂಟಲ್ ಮ್ಯಾನ್ ಆಟ ಅಂತೀವಿ. ಈ ಜಂಟಲ್ ಮ್ಯಾನ್ ಕ್ರಿಡೆಯ ರಾಯಭಾರಿ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್.  ಬರೀ ಟೀಮ್ ಇಂಡಿಯಾ ಮಾತ್ರವಲ್ಲ ವಿಶ್ವಕ್ರಿಕೆಟಿನ ಶಿಸ್ತಿನ ಸಿಪಾಯಿ ದ್ರಾವಿಡ್.  ಆಪತ್ಭಾಂದವನಾಗಿ ಭರತ ತಂಡಕ್ಕೆ ಲೆಕ್ಕವಿಲ್ಲದಷ್ಟು ಗೆಲುವನ್ನು ತಂದುಕೊಟ್ಟ ಮಹಾ ಸೇನಾನಿ. ದ್ರಾವಿಡ್ ಕ್ರೀಸ್ ನಲ್ಲಿ ನಿಂತಿದ್ದಾರೆ ಅಂತಾದ್ರೆ ಎದುರಾಳಿಗಳಲ್ಲಿ ನಡುಕ  ಇದ್ದೇ ಇರ್ತಿತ್ತು. ದ್ರಾವಿಡ್ ಅವರನ್ನು ಔಟ್ ಮಾಡುವುದೇ ಎದುರಾಳಿ ಬೌಲಿಂಗ್ ಪಡೆಗೆ ದೊಡ್ಡ ಸವಾಲಾಗಿತ್ತು. ನೆಲಕಚ್ಚಿ ತಾಳ್ಮೆಯ ಆಟ ಆಡಿ ಕಾಡುತ್ತಿದ್ದ ದ್ರಾವಿಡ್ ಅಗತ್ಯವಿದ್ದಾಗ ಹೊಡಿಬಡಿ ಆಟ ಆಡಿದ್ದೂ ಇದೆ. ಸಮಕಾಲೀನ ಕ್ರಿಕೆಟ್ ನಲ್ಲಿ ಸದ್ದಿಲ್ಲದೆ ದೊಡ್ಡ ಸ್ಟಾರ್ ಆದವರು.

ಟೀಮ್ ಇಂಡಿಯಾದ ಮಾಜಿ ನಾಯಕರೂ ಆಗಿರುವ ರಾಹುಲ್ ದ್ರಾವಿಡ್, ಇದೀಗ ವಿಸ್ಡನ್ ಇಂಡಿಯಾ ಕೈಗೊಂಡಿದ್ದ ಸಾರ್ವಕಾಲಿಕ ಶ್ರೇಷ್ಠ ಭಾರತೀಯ ಟೆಸ್ಟ್ ಬ್ಯಾಟ್ಸ್ ಮನ್ ಆಯ್ಕೆಯಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ವಿಸ್ಡನ್ ಇಂಡಿಯಾ ಅಫಿಶಿಯಲ್ ಫೇಸ್ ಬುಕ್ ಪೇಜಲ್ಲಿ ನಡೆಸಿದ ಈ ಆಯ್ಕೆ ಪ್ರಕ್ರಿಯೆಯಲ್ಲಿ 16 ಆಟಗಾರರು ಸ್ಪರ್ಧೆಯಲ್ಲಿದ್ದರು. ಅಂತಿಮ ನಾಲ್ವರಲ್ಲಿ ದ್ರಾವಿಡ್ , ಸಚಿನ್, ಸುನೀಲ್ ಗವಸ್ಕಾರ್ ಮತ್ತು ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ನಡುವೆ ಪೈಪೋಟಿ ಇತ್ತು. ಫೈನಲ್ ನಲ್ಲಿ ದ್ರಾವಿಡ್ ಮತ್ತು ಸಚಿನ್ ನಡುವೆ ಫೈಟ್ ಏರ್ಪಟ್ಟಿತ್ತು. ಅಂತಿಮವಾಗಿ ದ್ರಾವಿಡ್ ಸಚಿನ್ ರನ್ನು ಮೀರಿಸಿದರು.

“ ಒಟ್ಟು ಮತಗಳಲ್ಲಿ ದ್ರಾವಿಡ್ ಶೇ 52ರಷ್ಟು ಮತಗಳನ್ನು ಪಡೆಯುವ ಮೂಲಕ ವಿಸ್ಡನ್ ಸಾರ್ವಕಾಲಿಕ ಭಾರತದ ಶ್ರೇಷ್ಠ ಟೆಸ್ಟ್  ಬ್ಯಾಟ್ಸ್ ಮನ್ ಆದರು. ದ್ರಾವಿಡ್ ಅವರಿಗೆ ಅಭಿಮಾನಿಗಳು 11,400 ಮತಗಳನ್ನು ನೀಡಿದ್ದಾರೆ. ಆರಂಭದಲ್ಲಿ ಶೇ 42ರಷ್ಟು ಹಿನ್ನೆಡೆಯಲ್ಲಿದ್ದರೂ ಬಳಿಕ ಮುನ್ನುಗಿದ ಅವರು ಅಂತಿಮವಾಗಿ ಸಚಿನ್ ಗಿಂತ ಹೆಚ್ಚು ಮತ ಪಡೆದರು.  ತಮ್ಮ ವೃತ್ತಿ ಬದುಕಿನಲ್ಲಿ ರಕ್ಷಣಾತ್ಮಕ ಬ್ಯಾಟಿಂಗ್‌ ನಡೆಸುತ್ತಿದ್ದ ದ್ರಾವಿಡ್‌ ಇಲ್ಲಿಯೂ ಕೂಡ ಆರಂಭದಲ್ಲಿ ನಿಧಾನವಾಗಿ ಕಂಡರೂ ಬಳಿಕ ಮತಗಳಿಕೆ ಹೆಚ್ಚಿಸಿಕೊಂಡರು,” ಎಂದು ವಿಸ್ಡನ್‌ ಇಂಡಿಯಾ ವರದಿ ಮಾಡಿದೆ.

ಅದೇನೇ ಇರಲಿ ವಿಶ್ವಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್  ದ್ರಾವಿಡ್ ಇಬ್ಬರೂ ಕೂಡ ಶ್ರೇಷ್ಠರೇ. ವಿಶ್ವಕ್ರಿಕೆಟ್ ಗೆ ಈ ಇಬ್ಬರು ಕೊಟ್ಟ ಕೊಡುಗೆ ಅಪಾರ .. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ಮಾದರಿ ಎರಡರಲ್ಲೂ ಇಬ್ಬರು ಕೂಡ 10 ಸಾವಿರಕ್ಕೂ ಅಧಿಕ ರನ್ ಸಂಪಾದಿಸಿದ್ದಾರೆ . ಭಾರತದಿಂದಾಚೆಗೂ ಅಭಿಮಾನಿಗಳನ್ನು ಹೊಂದಿದ್ದಾರೆ

.

 

 

 

RELATED ARTICLES

Related Articles

TRENDING ARTICLES