ಉಡುಪಿ : ಉಡುಪಿಯ ಶ್ರೀ ಪೇಜಾವರ ಮಠಾಧೀಶ, ಅಯೋಧ್ಯೆ ರಾಮಮಂದಿರ ಟ್ರಸ್ಟ್ ನ ವಿಶ್ವಸ್ಥರೂ ಆಗಿರುವ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾತುರ್ಮಾಸ್ಯ ವ್ರತ ಸಂಕಲ್ಪ ಸ್ವೀಕರಿಸಿದ್ದಾರೆ. ಉಡುಪಿ ಬ್ರಹ್ಮಾವರದ ನೀಲಾವರದಲ್ಲಿ ಶ್ರೀಗಳು ಪ್ರೀತಿಯಿಂದ ನಡೆಸುತ್ತಿರುವ ಗೋ ಶಾಲೆಯಲ್ಲಿ ಚಾತುರ್ಮಾಸ ವ್ರತ ಕೈ ಗೊಂಡಿರುವುದು ವಿಶೇಷವಾಗಿದೆ. ಗೋ ಶಾಲೆಯಲ್ಲಿ ಸುಮಾರು 1500 ಕ್ಕೂ ಅಧಿಕ ಗೋವುಗಳು ಆಶ್ರಯ ಪಡೆಯುತ್ತಿದ್ದು, ಗುರು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಗಲಿದ ನಂತರ ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಇಲ್ಲಿಯೇ ತಮ್ಮ ಪ್ರಥಮ ಚಾತುರ್ಮಾಸ್ಯ ಕೈಗೊಂಡಿರುವುದು ವಿಶೇಷತೆಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಸೋದೆ ಶ್ರೀಗಳು ಶಿರಸಿಯ ಸೋಂದಾ ಕ್ಷೇತ್ರ ಮತ್ತು ತೀರಾ ವಿರಳವೆಂಬಂತೆ ಒಂದು ಬಾರಿ ಪಲಿಮಾರು ಶ್ರೀಗಳು ಕೋಟೇಶ್ವರದಲ್ಲಿ ಚಾತುರ್ಮಾಸ್ಯ ವ್ರತ ನಡೆಸಿದ್ದು ಬಿಟ್ಟರೆ ಉಡುಪಿಯ ಅಷ್ಟ ಮಠದ ಯತಿಗಳು ಉಡುಪಿಯ ಉತ್ತರ ಭಾಗದಲ್ಲಿ ಅದೂ ಕುಂದಾಪುರ ಬ್ರಹ್ಮಾವರದ ಆಸುಪಾಸಿನಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದೂ ಅಪರೂಪ. ಅಯೋಧ್ಯೆ ರಾಮಮಂದಿರದ ವಿಶ್ವಸ್ಥ ಮಂಡಳಿಯ ಸದಸ್ಯರೂ ಅಗಿರುವುದರಿಂದ ಶ್ರೀಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರೊಂದಿಗೆ ನೀಲಾವರದಂತಹ ಗ್ರಾಮೀಣ ಭಾಗದಲ್ಲಿ ಚಾತುರ್ಮಾಸ್ಯ ನಡೆಸುತ್ತಿರುವುದು ಗ್ರಾಮೀಣ ಭಾಗದ ಜನರಲ್ಲಿ ಸಂತಸ ತಂದಿದೆ. ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನೂ ಶ್ರೀಗಳ ನೀಲಾವರದಲ್ಲೆ ನಡೆಸಲಿದ್ದಾರೆ.