Monday, January 13, 2025

ಶಿವಮೊಗ್ಗ ಕಾರಾಗೃಹದಲ್ಲಿ ಸ್ಯಾನಿಟೈಸರ್ ಟನೆಲ್ ಯಂತ್ರ ಆಳವಡಿಕೆ..!

ಶಿವಮೊಗ್ಗ : ರಾಜ್ಯದಲ್ಲಿ ಅಷ್ಟೇ ಅಲ್ಲ, ಇಡೀ ಭಾರತದಲ್ಲಿಯೇ, ಅತ್ಯಂತ ವಿಶೇಷತೆ ಹೊಂದಿರುವ ಜೈಲು ಇದು. ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಆದ್ರೂ ಕೂಡ ಇದು ಕಾರಾಗೃಹ. ಇಂತಹ ಸುಸಜ್ಜಿತವಾದ ಜೈಲು ಇಡೀ ಭಾರತದಲ್ಲಿಯೇ ಮತ್ತೊಂದಿಲ್ಲ ಎಂಬ ಹೆಗ್ಗಳಿಕೆ ಜೊತೆಗೆ ಇದು ಕೊರಿಯನ್ ಮಾದರಿ ಜೈಲು ಎಂಬ ಹೆಗ್ಗಳಿಕೆ ಬೇರೆ.

ಹೌದು, ಶಿವಮೊಗ್ಗದ ಈ ಕೇಂದ್ರ ಕಾರಾಗೃಹದಲ್ಲಿ ಬೇರೆ ಜೈಲುಗಳಂತೆ ಇಲ್ಲಿ ಬ್ಯಾರಕ್ ಗಳಿಲ್ಲ. ಬದಲಾಗಿ ಇಲ್ಲಿ ಸೆಲ್ ಗಳಿವೆ. ಇಲ್ಲಿ ಒಟ್ಟು 269 ಸೆಲ್ ಗಳಿದ್ದು, ಇಡೀ ಭಾರತ ದೇಶದಲ್ಲಿಯೇ ಕೇವಲ ಸೆಲ್ ಗಳಿರುವ ಜೈಲುಗಳೇ ಇಲ್ಲ. ಬದಲಾಗಿ ಬ್ಯಾರಕ್ ಗಳಿರುತ್ತವೆ. ಈ ಬ್ಯಾರಕ್ ಗಳಲ್ಲಿ 40 ರಿಂದ 50 ಜನ ಸಜಾ ಬಂಧಿಗಳಿರುತ್ತಾರೆ. ಆದ್ರೆ, ಈ ಸುಂದರ ಜೈಲಿನಲ್ಲಿ, ಸೆಲ್ ಗಳಿದ್ದು, ಪ್ರತಿಯೊಂದು ಸೆಲ್ ನಲ್ಲಿ ಇಬ್ಬರಿಗೆ ಅವಕಾಶ ಇದ್ದು, ಪ್ರತಿ ಸೆಲ್ ನಲ್ಲಿ ಬಾತ್ ರೂಂ, ಟಾಯ್ಲೆಟ್ ಸೇರಿದಂತೆ, ಟಿ.ವಿ. ಕೂಡ ಅಳವಡಿಸಲಾಗಿದೆ. ಇಲ್ಲಿ ಪ್ರತ್ಯೇಕವಾಗಿ ಮಹಿಳಾ ಬಂಧಿಖಾನೆ ಕೂಡ ಇದ್ದು, ಇದೀಗ ಈ ಜೈಲಿನಲ್ಲಿ ವಿಶೇಷತೆಯಿಂದ ಕೂಡಿರುವ ಸ್ಯಾನಿಟೈಸರ್ ಮಾಡುವ ಟನೆಲ್ ಅಳವಡಿಸಲಾಗಿದೆ. ಇದು ಇದೀಗ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 1 ಲಕ್ಷದ 2 ಸಾವಿರ ರೂ. ವೆಚ್ಚದಲ್ಲಿ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಮೂಲಕ ಈ ಯಂತ್ರ ಅಳವಡಿಸಲಾಗಿದ್ದು, ಇದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿದೆ. ಎಲ್ಲೆಡೆ ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡಬಾರದೆಂಬ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಿ ಈ ವಿಶೇಷ ಯಂತ್ರ ಇಲ್ಲಿ ಅಳವಡಿಸಲಾಗಿದೆ.

ಅಂದಹಾಗೆ, ಈ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಈ ಸ್ಯಾನಿಟೈಸರ್ ಟನೆಲ್ ಯಂತ್ರ ವಿಶೇಷವಾಗಿದ್ದು, ವ್ಯಕ್ತಿಯೊಬ್ಬರು ಈ ಯಂತ್ರದೊಳಗೆ ಹೋಗಿ ನಿಂತ್ರೆ ಸಾಕು, ಮೂರು ಪೈಪ್ ಗಳಲ್ಲಿ ಸ್ಪಿಂಕ್ಲರ್ ಮೂಲಕ ಇಡೀ ದೇಹವನ್ನು ಸ್ಯಾನಿಟೈಸರ್ ಮಾಡುತ್ತದೆ ಈ ಯಂತ್ರ. ಅದರಲ್ಲೂ, ಬಯೋ ಆರ್ಗ್ಯಾನಿಕ್ ಸ್ಯಾನಿಟೈಸರ್ ಮೂಲಕ ದೇಹವನ್ನೆಲ್ಲಾ ಸಿಂಪಡಣೆ ಮಾಡಿದ್ರೂ ಕೂಡ, ದೇಹಕ್ಕೆ ಯಾವುದೇ ಅಡ್ಡ ಪರಿಣಾಮಗಳಿಲ್ಲದ ಸ್ಯಾನಿಟೈಸರ್ ನ್ನು ಈ ಯಂತ್ರದಲ್ಲಿ ಅಳವಡಿಸಲಾಗಿದೆ. ಬಂಧಿಖಾನೆಯ ಸಿಬ್ಭಂಧಿಗಳು, ಅಧಿಕಾರಿಗಳು, ಸಜಾಬಂಧಿಗಳು ಸೇರಿದಂತೆ, ಯಾರೇ ಹೊರಗಿನಿಂದ ಬಂದರೂ ಕೂಡ ಈ ಟನೆಲ್ ನಿಂದಲೇ, ಕಾರಾಗೃಹದ ಒಳಪ್ರವೇಶಿಸಬೇಕು. ಹೀಗಾಗಿ, ಪ್ರತಿಯೊಬ್ಬ ಸಿಬ್ಭಂಧಿಗಳು, ಸಜಾ ಬಂಧಿಗಳು, ಸ್ಯಾನೀಟೈಸ್ ಆಗುವುದರಿಂದ, ಈ ಕಾರಾಗೃಹದಲ್ಲಿ ಕೊರೊನಾ ಸೋಂಕು ಹರಡುವ ಮಾತು ದೂರ. ಈ ವಿಶೇಷ ಸ್ಯಾನಿಟೈಸರ್ ಟನೆಲ್ ಯಂತ್ರ ಅಳವಡಿಕೆ ಮೂಲಕ ಇಲ್ಲಿ ಸಜಾ ಬಂಧಿಗಳು ಕೂಡ ಸುರಕ್ಷಿತವಾಗಿದ್ದಾರೆ.

-ಗೋ.ವ. ಮೋಹನಕೃಷ್ಣ, ಶಿವಮೊಗ್ಗ.

RELATED ARTICLES

Related Articles

TRENDING ARTICLES