ಚಿಕ್ಕಮಗಳೂರು : ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆಯೇ ಹಿಡಿದಿರುವ ಜಡಿಮಳೆ ರಾಜ್ಯ ಸರ್ಕಾರದ ಭಾನುವಾರದ ಲಾಕ್ ಡೌನ್ ಗೆ ಸಾಥ್ ನೀಡಿದಂತಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆ ಮಳೆ ಆರಂಭವಾಗಿರುವುದರಿಂದ ನಗರದಲ್ಲಿ ಜನಸಾಮಾನ್ಯರ ಓಡಾಟ ತೀರಾ ವಿರಳವಾಗಿದೆ. ಮಳೆಯ ಜೊತೆ ಬೀಸುತ್ತಿರುವ ತಣ್ಣನೆಯ ಗಾಳಿ ಜನಸಾಮಾನ್ಯರನ್ನು ಮನೆಯಲ್ಲೇ ಇರುವಂತೆ ಪ್ರೇರೇಪಿಸುತ್ತಿದೆ. ನಗರದಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರಂಭವಾಗಿರುವುದರಿಂದ ಪೊಲೀಸರಿಗೆ ಕಾರ್ಯಾಭಾರವು ಒಂದಷ್ಟು ಕಡಿಮೆಯಾದಂತಿದೆ. ಸರ್ಕಾರದ ಲಾಕ್ಡೌನ್ ಆದೇಶ ಹಾಗೂ ಸುರಿಯುತ್ತಿರುವ ಜಡಿ ಮಳೆಯ ಮಧ್ಯೆಯೂ ಕೆಲವರು ಸುಖಾಸುಮ್ಮನೆ ಬೀದಿಗಿಳಿಯುತ್ತಿದ್ದಾರೆ. ಕಾರಣವಿಲ್ಲದೆ ರಸ್ತೆಗೆ ಇಳಿಯುತ್ತಿರುವ ಜನರಿಗೆ ಪೊಲೀಸರು ತಿಳಿಹೇಳಿ ವಾಪಸ್ಸು ಕಳಿಸುತ್ತಿದ್ದಾರೆ. ಕೆಲ ಜನರು ಲಾಕ್ ಡೌನ್ ಎಂದು ಗೊತ್ತಿದ್ದರೂ ಕೂಡ ವಾಕ್ ಬರುತ್ತಿದ್ದು ಪೊಲೀಸರು ಅವರನ್ನು ಎಚ್ಚರಿಸಿ ವಾಪಸ್ಸು ಕಳಿಸುತ್ತಿದ್ದಾರೆ. ಕೆಲ ಯುವಕರು ಸುಖಾಸುಮ್ಮನೆ ಕಾರು ಬೈಕುಗಳಲ್ಲಿ ನಗರದಲ್ಲಿ ಓಡಾಡುತ್ತಿದ್ದು ಅವರನ್ನು ಅಡ್ಡ ಹಾಕುತ್ತಿರುವ ಪೊಲೀಸರು ಮನೆಗೆ ಹೋಗುವಂತೆ ಸೂಚನೆ ನೀಡುತ್ತಿದ್ದಾರೆ. ಮತ್ತೆ ನಗರದಲ್ಲಿ ಹೋರಾಟ ನಡೆಸಿದರೆ ಗಾಡಿಗಳನ್ನು ಸೀಜ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅಗತ್ಯವಸ್ತುಗಳ ವಾಹನಗಳ ಓಡಾಟ ಎಂದಿನಂತಿದೆ. ಆದರೆ, ಬೆಳಗ್ಗೆಯಿಂದ ಆರಂಭವಾದ ಜಡಿ ಮಳೆಯಿಂದ ಜನಸಾಮಾನ್ಯರು ರಸ್ತೆಗೆ ಇಳಿಯುತ್ತಿಲ್ಲ. ನಗರದಾದ್ಯಂತ ಪೊಲೀಸರ ಸರ್ಪಗಾವಲಿದ್ದು, ರಸ್ತೆಗಳಲ್ಲಿ ಓಡಾಡುತ್ತಿರುವ ಜನರಿಗೆ ಕೊರೋನ ಬಗ್ಗೆ ಜಾಗೃತಿ ಮೂಡಿಸಿ ಮನೆಗಳಿಗೆ ಹಿಂದಿರುಗಿಸುತ್ತಿದ್ದಾರೆ. ಸರ್ಕಾರ ಕೊರೋನ ನಿಯಂತ್ರಣಕ್ಕೆ ಜಾರಿಗೆ ತಂದಿರುವ ಭಾನುವಾರದ ಲಾಕ್ ಡೌನ್ ಗೆ ವರುಣದೇವ ಕೂಡ ಸಾಥ್ ನೀಡಿದ್ದಾರೆ…