ಚಿಕ್ಕಮಗಳೂರು : ಕೊರೋನ ಆತಂಕದಿಂದ ಇಡೀ ರಾಜ್ಯವೇ ಲಾಕ್ ಡೌನ್ ಆಗಿದೆ. ಆದರೆ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹಾಗೂ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಲಾಕ್ ಡೌನ್ ನಮಗಲ್ಲ ಎಂಬಂತೆ ಸ್ಥಳೀಯ ಜನ ಪ್ರತಿನಿಧಿಗಳ ಜೊತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರೋ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಸ್ಥಳಗಳಾದ ದೇವರಮನೆಗುಡ್ಡ, ಹೇಮಾವತಿ ನದಿ ಮೂಲ, ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದ ಸಚಿವ ಸಿ.ಟಿ.ರವಿ, ಮೂಡಿಗೆರೆ ಶಾಸಕ ಕುಮಾರಸ್ವಾಮಿ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಭೇಟಿ ನೀಡಿದ್ದು ಸಾಮಾಜಿಕ ಅಂತರವನ್ನ ಸಂಪೂರ್ಣ ಗಾಳಿಗೆ ತೂರಿದ್ದಾರೆ. ಅದರಲ್ಲೂ ಜನಸಾಮಾನ್ಯರಿಗೆ ತಿಳಿ ಹೇಳಬೇಕಾದ ಶಾಸಕ ಕುಮಾರಸ್ವಾಮಿ ಮುಖಕ್ಕೆ ಮಾಸ್ಕ್ ಕೂಡ ಹಾಕಿಲ್ಲ. ಸಚಿವರು ಹಾಗೂ ಶಾಸಕರ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನಸಾಮಾನ್ಯರು ಮನೆಯಿಂದ ಹೊರಬಂದರೆ ಪೊಲೀಸರು ಗಾಡಿಗಳನ್ನ ಅಡ್ಡ ಹಾಕಿ ಗಾಡಿಗಳನ್ನು ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡುತ್ತಾರೆ. ಕೆಲವರು ಲಾಠಿ ಬೀಸುತ್ತಾರೆ. ಆದರೆ ಸಚಿವರು ಹಾಗೂ ಶಾಸಕರ ಈ ಕಾನೂನು ಉಲ್ಲಂಘನೆ ಬಗ್ಗೆ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಜನ ಪ್ರಶ್ನಿಸಿದ್ದಾರೆ. ಪ್ರವಾಸಿ ತಾಣಗಳಿಗೆ ಸಚಿವರು ಹಾಗೂ ಶಾಸಕರ ಈ ಭೇಟಿಯ ಕಾರ್ಯಕ್ರಮದಲ್ಲಿ ಸುಮಾರು 30 ರಿಂದ 40 ಜನ ಭಾಗಿಯಾಗಿದ್ದರು. ಆದರೆ, ಸಚಿವರು ಹಾಗೂ ಶಾಸಕರ ಎದುರು ಜನಪ್ರತಿನಿಧಿಗಳು ಸೇರಿದಂತೆ ಯಾರೊಬ್ಬರೂ ಕೂಡ ಸಾಮಾಜಿಕ ಅಂತರವನ್ನು ಪಾಲಿಸಿಲ್ಲ. ಜನಸಾಮಾನ್ಯರು ಮುಖಕ್ಕೆ ಮಾಸ್ಕ್ ಹಾಕದಿದ್ದರೆ ಪೊಲೀಸರು 100 ರೂಪಾಯಿ ದಂಡ ಹಾಕುತ್ತಾರೆ. ಆದರೆ, ಇವತ್ತು ಮೂಡಿಗೆರೆ ಶಾಸಕ ಕುಮಾರಸ್ವಾಮಿಯವರೇ ಸಾರ್ವಜನಿಕವಾಗಿ ಮುಖಕ್ಕೆ ಮಾಸ್ಕ್ ಹಾಕಿಲ್ಲ. ಅವರಿಗೂ ದಂಡ ಹಾಕುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ರಾಜ್ಯದಲ್ಲಿ ಜನಪ್ರತಿನಿಧಿಗಳಿಗೆ ಒಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನಾ ಎಂದು ಸಾರ್ವಜನಿಕರು ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ..