ಮಂಗಳೂರು: ಕೋವಿಡ್ ದೃಢಪಟ್ಟ ವ್ಯಕ್ತಿಯೊಬ್ಬರನ್ನ ಚಿಕಿತ್ಸೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ಬೆನ್ನಿಗೆ ಅಲ್ಲಿಗೆ ಆಗಮಿಸಿ ಶಾಸಕ ಯುಟಿ ಖಾದರ್ ದಾಖಲಾತಿಗೆ ವ್ಯವಸ್ಥೆಯನ್ನ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ. ನೆರೆ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ಸಂದರ್ಭ ಖಾಸಗಿ ಆಸ್ಪತ್ರೆಯ ಕೋವಿಡ್ ವಿಭಾಗದ ಕಟ್ಟಡದ ಮುಂದೆ ಆ್ಯಂಬುಲೆನ್ಸ್ ನಿಂತಿರೋದನ್ನ ಗಮನಿಸಿದ ಶಾಸಕ ಯುಟಿ ಖಾದರ್, ತಕ್ಷಣ ತನ್ನ ವಾಹನದಿಂದ ಇಳಿದು ಸೋಂಕಿತ ವ್ಯಕ್ತಿಯ ದಾಖಲಾತಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಸೋಂಕಿತ ವ್ಯಕ್ತಿಯು 27 ರ ಹರೆಯ ಯುವಕನಾಗಿದ್ದು, ಆರೋಗ್ಯ ಇಲಾಖೆ ಸೂಚನೆಯಂತೆ ಖಾಸಗಿ ಕೋವಿಡ್ ಆಸ್ಪತ್ರೆಗೆ ದಾಖಲಾಗಲು ಆ್ಯಂಬುಲೆನ್ಸ್ ಮೂಲಕ ತೆರಳಿದ್ದಾರೆ. ಆದರೆ ಜಿಲ್ಲಾಡಳಿತದ ಯಾವುದೇ ಸೂಚನೆ ಬಾರದೇ ಇರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ಸೋಂಕಿತ ವ್ಯಕ್ತಿಯ ದಾಖಲಾತಿಗೆ ನಿರಾಕರಿಸಿದ್ದಾರೆ. ಇದರಿಂದ ಸುಮಾರು ಅರ್ಧ ಗಂಟೆ ಕಾಲ ಸೋಂಕಿತ ವ್ಯಕ್ತಿಯಿದ್ದ ಆ್ಯಂಬುಲೆನ್ಸ್ ರಸ್ತೆ ಬದಿಯಲ್ಲಿಯೇ ನಿಲ್ಲಬೇಕಾಯಿತು. ಇದರಿಂದ ಸಾರ್ವಜನಿಕರಲ್ಲೂ ಆತಂಕ ಶುರುವಾಗಿತ್ತು. ಆದರೆ ಅದೇ ಸಮಯಕ್ಕೆ ಆ ರಸ್ತೆಯಲ್ಲಿ ಬಂದ ಶಾಸಕ ಯುಟಿ ಖಾದರ್ ಇಲಾಖಾ ಅಧಿಕಾರಿಗಳ ಜೊತೆ ಮಾತನಾಡಿ ಸೋಂಕಿತ ವ್ಯಕ್ತಿಯನ್ನ ಚಿಕಿತ್ಸೆಗಾಗಿ ದಾಖಲಿಸುವಲ್ಲಿ ಯಶಸ್ವಿಯಾದರು.