ಸರ್ಕಾರಿ ಆಸ್ಪತ್ರೆಯಲ್ಲೇ ನಡೀತು ಯಶಸ್ವಿ ಅಪರೇಶನ್ ಮಹಿಳೆಗೆ ಪುನರ್ಜನ್ಮ ನೀಡಿದ ವೈದ್ಯರು
ಚಿಕ್ಕಮಗಳೂರು : ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆ.ಜಿ ಗೆಡ್ಡೆಯನ್ನ ದೇಹದಿಂದ ಹೊರತೆಗೆದು ಮಹಿಳೆಯೊಬ್ಬರಿಗೆ ಪುನರ್ಜನ್ಮ ನೀಡಿರೋ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಆಸ್ಪತ್ರೆಯಲ್ಲಿ ನಡೆದಿದೆ. ಶಿವಮೊಗ್ಗ ಮೂಲದ 45 ವರ್ಷದ ಶಫುರಭಿ ಎಂಬ ಮಹಿಳೆಯ ಹೊಟ್ಟೆಯಲ್ಲಿದ್ದ ಗೆಡ್ಡೆಯನ್ನ ಅಪರೇಶನ್ ಮಾಡಿ ಕೊಪ್ಪದ ವೈದ್ಯ ಬಾಲಕೃಷ್ಣರವರು ಹೊರತೆಗೆದಿದ್ದಾರೆ. ಅಪರೇಶನ್ ವೇಳೆ ಡಾ.ಬಾಲಕೃಷ್ಣರವರಿಗೆ ಡಾ. ಧನಂಜಯ್, ನರ್ಸ್ ರೇಷ್ಮಾ, ಸಿಬ್ಬಂದಿಗಳಾದ ಮಂಜುನಾಥ್ ಸಾಥ್ ನೀಡಿದ್ದಾರೆ. ಯಶಸ್ವಿ ಚಿಕಿತ್ಸೆ ಬಳಿಕ ಆರೋಗ್ಯವಾಗಿರೋ ಮಹಿಳೆ ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ
ಕಳೆದ ಕೆಲ ತಿಂಗಳಿನಿಂದ ಶಫುರಭಿ ತುಂಬಾನೇ ದಪ್ಪ ಆಗುತ್ತಾ ಬರುತ್ತಿದ್ದರು. ಮಹಿಳೆಯ ಹೊಟ್ಟೆಯ ಭಾಗ ಕೂಡ ಉಬ್ಬ ತೊಡಗಿತು. ದಪ್ಪ ಆಗಿರೋ ಪರಿಣಾಮದಿಂದಲೇ ಹೊಟ್ಟೆ ಕೂಡ ಉಬ್ಬಿರಬಹುದು ಅಂತಾ ಭಾವಿಸಿದ್ರು. ಆದ್ರೆ ಬರ ಬರುತ್ತಾ ಉಸಿರಾಟದ ಸಮಸ್ಯೆ ಮಹಿಳೆಗೆ ಎದುರಾಗತೊಡಗಿತು. ಈ ವೇಳೆ ಸ್ಕ್ಯಾನಿಂಗ್ ಮಾಡಿಸಿದಾಗಲೇ ಮಹಿಳೆಗೆ ಗೊತ್ತಾಗಿದ್ದು ಹೊಟ್ಟೆಯಲ್ಲಿ ಗೆಡ್ಡೆಯೊಂದು ಬೆಳೆಯುತ್ತಿದೆ ಅನ್ನೋ ಶಾಕಿಂಗ್ ವಿಚಾರ. ಸಾಧಾರಣವಾಗಿ ½ ಕೆಜಿ, 1 ಕೆಜಿ ಅಬ್ಬಬ್ಬಾ ಅಂದ್ರೆ 2 ಕೆಜಿ ಈ ರೀತಿ ಗೆಡ್ಡೆ ಮನುಷ್ಯನ ದೇಹದಲ್ಲಿ ಬೆಳೆಯುತ್ತಿರುತ್ತದೆ. ಅದನ್ನ ವೈದ್ಯರು ಹೊರತೆಗೆದ ವಿಚಾರವನ್ನ ನಾವು ಅಲ್ಲಲ್ಲಿ ಕೇಳುತಿರುತ್ತೇವೆ. ಆದ್ರೆ ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಬರೋಬ್ಬರಿ 15 ಕೆಜಿ ಗೆಡ್ಡೆ ಬೆಳೆದಿದೆ ಅನ್ನೋದನ್ನ ತಿಳಿದ ವೈದ್ಯರಿಗೂ ಅಚ್ಚರಿ ಎನಿಸಿತು. ತಡಮಾಡದ ವೈದ್ಯರು ಕೂಡಲೇ ಅಪರೇಶನ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ರು. ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲೇ ಇಂತದ್ದೊಂದು ಅಪರೇಶನ್ ಮಾಡಬಹುದು ಅನ್ನೋದನ್ನ ಮಹಿಳೆಗೆ ಹೇಳಿ ಧೈರ್ಯ ತುಂಬಿದ್ರು. ಪರಿಣಾಮ, ವೈದ್ಯ ಬಾಲಕೃಷ್ಣರ ಪರಿಶ್ರಮದಿಂದ ಸರ್ಕಾರಿ ಆಸ್ಪತ್ರೆಯಲ್ಲೇ ಯಶಸ್ವಿ ಅಪರೇಶನ್ ಕೂಡ ನಡೆದು ಹೋಯಿತು. ಸದ್ಯ ಮಹಿಳೆಯ ಹೊಟ್ಟೆಯಿಂದ 15 ಕೆಜಿ ಗೆಡ್ಡೆ ಹೊರಬಂದಿದ್ದು, ಭಾರ ಇಳಿಸಿಕೊಂಡಿರೋ ಶಫುರಭಿ ಆರೋಗ್ಯವಾಗಿದ್ದಾರೆ ಮಹಿಳೆಗೆ ಪುನರ್ಜನ್ಮ ನೀಡಿರೋ ವೈದ್ಯರ ತಂಡ, ವೈದ್ಯೋ ನಾರಾಯಣ ಹರಿ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ ಪವರ್ ಟಿವಿ ಕಡೆಯಿಂದಲೂ ವೈದ್ಯರ ತಂಡಕ್ಕೆ ಹ್ಯಾಟ್ಸಾಫ್…