ಶಿವಮೊಗ್ಗ : ಮೊಬೈಲ್ ಸುಲಿಗೆ ಮತ್ತು 3 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ, ತಪ್ಪಿಸಿಕೊಂಡು, ಪೊಲೀಸರಿಗೆ ತಲೆನೋವಾಗಿದ್ದ ಆರೋಪಿಯನ್ನು ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳಾದ 19 ವರ್ಷದ ಪ್ರಶಾಂತ್ ಮತ್ತು 18 ವರ್ಷದ ದರ್ಶನ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ. ನಗರದ ಎಲ್.ಬಿ.ಎಸ್. ನಗರ ಮತ್ತು ಬೊಮ್ಮನಕಟ್ಟೆ ವಾಸಿಗಳಾಗಿದ್ದ ಇಬ್ಬರು ಕಳ್ಳರ ವಿರುದ್ಧ ಕಳೆದ ವರ್ಷ ನಗರದ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್ ಸುಲಿಗೆ ಮತ್ತು 3 ದ್ವಿಚಕ್ರ ವಾಹನಗಳ ಕಳ್ಳತನ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆಗಾಗಿ ರಚಿಸಲಾಗಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಭಂಧಿಗಳ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಬೇಧಿಸಿ, ಕಳ್ಳನನ್ನು ಸೆರೆ ಹಿಡಿದಿದ್ದಾರೆ. ಇನ್ನು ಕಳ್ಳನಿಂದ 15,297 ರೂ. ಮೌಲ್ಯದ ವಿವೋ ಕಂಪೆನಿಯ ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ 45 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಇದಲ್ಲದೇ, ಕಳ್ಳನಿಂದ 22 ಸಾವಿರ ರೂ. ಮೌಲ್ಯದ ಹೊಂಡಾ ಆಕ್ಟಿವಾ, 48 ಸಾವಿರ ರೂ. ಮೌಲ್ಯದ ಬಜಾಜ್ ಪಲ್ಸರ್ ಮತ್ತು 25 ಸಾವಿರ ರೂ. ಮೌಲ್ಯದ ಹೋಂಡಾ ಆಕ್ಟಿವಾ 3 ಬೈಕ್ ಗಳನ್ನು ಕೂಡ ಕಳ್ಳನಿಂದ ವಶಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಯನ್ನು ಘನ ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.