ಹಾಸನ : ಸಕಲೇಶಪುರ ತಾಲ್ಲೂಕಿನಲ್ಲಿರುವ ಮುಂಜರಾಬಾದ್ ಕೋಟೆಯ ಮೂಲ ಸ್ವರೂಪಕ್ಕೆ ದಕ್ಕೆಯಾಗದಂತೆ ಕೇಂದ್ರ ಪುರಾತತ್ವದ ಅನುಮತಿ ಪಡೆದು 3 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ. ರವಿ ಅವರು ತಿಳಿಸಿದ್ದಾರೆ. ಮುಂಜರಾಬಾದ್ ಕೋಟೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದ್ದು, ಪೂರ್ವಿಕರು ಅಂದಿನ ಕಾಲದಲ್ಲಿಯೇ ಎಲ್ಲಾ ದಿಕ್ಕುಗಳಲ್ಲೂ ಶತ್ರುಗಳನ್ನು ಗುರುತಿಸಲು ಕಾವಲು ಗೋಪುರಗಳನ್ನು ನಿರ್ಮಿಸಿದ್ದಾರೆ, ಇದು ಪೂರ್ವಿಕರ ಜ್ಞಾನಕ್ಕೆ ಸಾಕ್ಷಿಯಾಗಿ ನಿಂತಿದೆ ಇದನ್ನು ಉಳಿಸಿಕೆಳ್ಳಬೇಕು ಎಂದರು.
ಕೋಟೆಯ ಸ್ವಚ್ಛತೆ ಕಾಪಾಡಲು ಜನರ ಸಹಭಾಗಿತ್ವ ಬೇಕಾಗಿದೆ ಹಾಗೂ ಗ್ರಾಮೀಣ ಪ್ರವಾಸೋದ್ಯಮ ಸಮಿತಿ ಮಾಡಬೇಕು ಅಥವಾ ಅರಣ್ಯ ವ್ಯಾಪ್ತಿಗೆ ಸೇರಿದ್ದರೆ ಅರಣ್ಯ ಪ್ರವಾಸೋದ್ಯಮ ಸಮಿತಿ ಮಾಡಿ ನಿಬಂಧನೆಗಳನ್ನು ಹಾಕಿ ಪ್ರವಾಸಿಗರಿಗೆ ಅತಿರೇಕದ ವರ್ತನೆಯನ್ನು ತೋರಿಸದಂತೆ ಸ್ಥಳ ಹಾಳುಮಾಡದಂತೆ ಎಚ್ಚರಿಕೆಯನ್ನು ವಹಿಸಬೇಕು ಹಾಗಾಗಿ ಸ್ಥಳೀಯರು ಉತ್ಸಾಹ ತೋರಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ವಿಶ್ವದ ಎಲ್ಲಾ ರಾಷ್ಟ್ರಗಳೂ ಕೋವಿಡ್-19 ನಿಂದ ಸಂಕಷ್ಟ ಎದುರಿಸುತ್ತಿವೆ. ಎಲ್ಲಾ ರಾಷ್ಟ್ರಗಳ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿದೆ ಅದರಂತೆ ಲಾಕ್ ಡೌನ್‍ನಿಂದ ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅಂದಾಜು ಇಪ್ಪತ್ತು ಸಾವಿರ ಕೋಟಿ ನಷ್ಟ ಉಂಟಾಗಿದೆ. ಹಂತ ಹಂತವಾಗಿ ಸಮಸ್ಯೆಯಿಂದ ಹೊರ ಬರಬೇಕಿದೆ ಎಂದು ಸಚಿವರು ತಿಳಿಸಿದರು.
ಲಾಕ್ ಡೌನ್ ನಿಂದ ಕೊರೋನಾ ಸೋಂಕು ಹರಡುವುದನ್ನು ಸ್ವಲ್ಪ ಮಟ್ಟಿಗೆ ಮಂದೂಡಬಹುದು ಆದರೆ ಸಂಪೂರ್ಣ ನಿಯಂತ್ರಣ ಕಷ್ಟ ಹಾಗಾಗಿ ಎಲ್ಲರೂ ಎಚ್ಚರಿಕೆ ವಹಿಸಿ ಕೋವಿಡ್-19 ತಡೆಗಟ್ಟುವಲ್ಲಿ ಮುಂದಾಗಬೇಕು ಸ್ವಯಂ ನಿಯಂತ್ರಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ಸಚಿವರು ಹೇಳಿದರು.
ಕೋವಿಡ್-19 ಸಮಯದಲ್ಲಿ ಎಚ್ಚರಿಕೆ ವಹಿಸವುದು ಅನಿವಾರ್ಯತೆ ಇದೆ. ನಗರ ಪ್ರದೇಶದಿಂದ ಸಾವಿರಾರು ಮಂದಿ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಿದ್ದು ಸ್ಥಳೀಯರು ಭಯಬೀತರಾಗಿದ್ದಾರೆ ಹಾಗಾಗಿ ಪ್ರವಾಸಿಗರಿಗು, ಸ್ಥಳೀಯರಿಗೂ ಸಂಘರ್ಷವಾಗದಂತೆ ಪ್ರವಾಸವನ್ನು ಮುಂದೂಡಿಕೊಳ್ಳುವುದು ಒಳಿತು ಎಂದು ಪ್ರವಾಸೋದ್ಯಮ ಸಚಿವರು ಹೇಳಿದರು. ಮಾಜಿ ಶಾಸಕರಾದ ಹೆಚ್.ಎಂ. ವಿಶ್ವನಾಥ್, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ತಹಶೀಲ್ದಾರ್ ಮಂಜುನಾಥ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಜಿ.ಆರ್. ಹರೀಶ್, ಪ್ರವಾಸೋಧ್ಯಮ ಇಲಾಖೆ ಉಪ ನಿರ್ದೇಶಕರಾದ ಶಿವಲಿಂಗಪ್ಪ ಎನ್. ಕುಂಬಾರ್ ಹಾಗೂ ಮತ್ತಿತರರು ಹಾಜರಿದ್ದರು.