ಕೋಲಾರ : ಕೋಲಾರದಲ್ಲಿ ಕೊರೋನಾ ಹೆಮ್ಮಾರಿ ತನ್ನ ಅಟ್ಟಹಾಸವನ್ನ ಮುಂದುವರೆಸುತ್ತಿದೆ. ಈಗಾಗಲೇ ಮೂವರನ್ನ ಕೊರೋನಾ ಬಲಿ ಪಡೆದುಕೊಂಡಿದೆ. ಇದೀಗ ಕೊವೀಡ್ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೊರೋನಾ ಧೃಢವಾಗಿದೆ.
ಕೋಲಾರದ ಸರ್ಕಾರಿ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಯ 43 ವರ್ಷದ ವೈದ್ಯರಿಗೆ ಕೊರೋನಾ ಖಚಿತವಾಗಿದೆ. 15 ದಿನಗಳಿಂದ ಎಸ್ಸೆನ್ನಾರ್ ಆಸ್ಪತ್ರೆಯಲ್ಲಿರುವ ಕೋವಿಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ಕೊರೋನಾ ದೃಢಪಟ್ಟಿರುವುದರಿಂದ ಹಲವರಲ್ಲಿ ಆತಂಕ ಮೂಡಿಸಿದೆ. ಮೂರು ದಿನಗಳಿಂದ ಕೆಮ್ಮು, ಜ್ವರ ಹಾಗೂ ನೆಗಡಿಯಿಂದ ಬಳಲುತ್ತಿದ್ದ ವೈದ್ಯರ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಿದಾಗ ಕೊರೋನಾ ದೃಢಪಟ್ಟಿದೆ. ಕೊರೋನಾ ಖಚಿತವಾಗುತ್ತಿದ್ದಂತೆ ಆಸ್ಪತ್ರೆಯ ಒಂದು ಭಾಗ ಸೀಲ್ ಡೌನ್ ಮಾಡಲಾಗಿತ್ತು, ಸೋಂಕಿತ ವೈದ್ಯರನ್ನ ಅದೇ ಆಸ್ಪತ್ರೆಯ ಕೋವಿಡ್ ವಿಭಾಗದಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ವೈದ್ಯರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಸೂಚನೆ ಕೊಡಲಾಗಿದ್ದು, ಹಲವರ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲು ಆಸ್ಪತ್ರೆಯ ವೈದ್ಯರು ನಿರ್ಧರಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 124 ಸೋಂಕಿತರು ಪತ್ತೆಯಾಗಿದ್ದು, 57 ಮಂದಿ ಗುಣಮುಖರಾಗಿದ್ದಾರೆ. 64 ಸಕ್ರೀಯ ಪ್ರಕರಣಗಳಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.