ಮುಂಬೈ : ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು. ಈ ಮೂಲಕ ಮಹಾರಾಷ್ಟ್ರದ ರಾಜಕೀಯದಲ್ಲಿ ಹೊಸ ಭಾಷ್ಯಕ್ಕೆ ನಾಂದಿ ಹಾಡಿದ್ದಾರೆ.
ಪ್ರಮಾಣವಚನದ ವೇದಿಕೆ ಏರುತ್ತಿದ್ದಂತೆ ಅಲ್ಲೇ ವೇದಿಕೆ ಬಳಿಯಲ್ಲಿದ್ದ ಛತ್ರಪತಿ ಶಿವಾಜಿ ಪುತ್ಥಳಿಗೆ ಶಿರಬಾಗಿ ನಮಿಸಿ, ಬಳಿಕ ಛತ್ರಪತಿ ಶಿವಾಜಿಯ ಹೆಸರಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಇವರ ಜೊತೆಯಲ್ಲೇ ಶಿವಸೇನೆಯ ನಾಯಕರಾದ ಏಕನಾಥ ಶಿಂಧೆ ಹಾಗೂ ಸುಭಾಷ್ ದೇಸಾಯಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಾಳಾಸಾಹೇಬ್ ಠಾಕ್ರೆ ಶಿವಸೇನೆಯನ್ನು ಸ್ಥಾಪನೆ ಮಾಡಿದ್ದರೂ ಅವರು ಎಂದಿಗೂ ಸರಕಾರದಲ್ಲಿ ಭಾಗಿಯಾಗಿರಲಿಲ್ಲ. ಹೀಗಾಗಿ ಶಿವಸೇನೆಯ ಇತಿಹಾಸದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಠಾಕ್ರೆ ಕುಟುಂಬದ ಮೊದಲ ಕುಡಿಯಾಗಿದ್ದಾರೆ. ಮಂಗಳವಾರ ಸಂಜೆ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಕೂಟ “ಮಹಾ ವಿಕಾಸ ಅಘಾಡಿ”ಯ ಜಂಟಿ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.