Sunday, January 12, 2025

ಕೋಲಾರ ಜಿಲ್ಲೆಯಲ್ಲಿ ಕೊರೋನಾಗೆ‌ ಮೊದಲ‌ ಬಲಿ..!

ಕೋಲಾರ: ಕೋಲಾರದಲ್ಲಿ ಕೊರೊನಾ ಹೆಮ್ಮಾರಿಗೆ ಮೊದಲ ಬಲಿಯಾಗಿದೆ. ದೆಹಲಿಯಿಂದ ವಾಪಸ್ಸಾಗಿದ್ದ 43 ವರ್ಷದ ಮಹಿಳೆಗೆ ಕೊರೋನಾ ಸೋಂಕು ತಗುಲಿತ್ತು ಇದೀಗ ಚಿಕಿತ್ಸೆ ಫಲಕಾರಿಯಾಗದೆ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಮೃತ ಮಹಿಳೆಯ ಗಂಡನಿಗೂ ಇದೀಗ ಕೊರೋನಾ ವಕ್ಕರಿಸಿದೆ.

ಕೋಲಾರ ಜಿಲ್ಲೆಯಲ್ಲಿ ಕೊರೋನಾ ದಿನೇ ದಿನೇ ತನ್ನ ಅಟ್ಟಹಾಸವನ್ನ ಮುಂದುವರೆಸುತ್ತಿದೆ. ಇದೀಗ ಕೊರೋನಾ ಹೆಮ್ಮಾರಿಗೆ 43 ವರ್ಷದ ಸೋಂಕಿತೆ  ಬಲಿಯಾಗಿದ್ದಾಳೆ. ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮಕ್ಕೆ ದೆಹಲಿಯಿಂದ ತನ್ನ ಗಂಡನೊಂದಿಗೆ ಮಹಿಳೆ ಹತ್ತು ದಿನಗಳ ಹಿಂದೆ ಆಗಮಿಸಿದ್ದಳು. ಲಾಕ್ ಡೌನ್ ಸಡಿಲಿಕೆಯಾದ ನಂತ್ರ ಜೂನ್ 14 ರಂದು ಇವ್ರು ತೂಕಲ್ಲು ಗ್ರಾಮಕ್ಕೆ ಬಂದಿದ್ದಾರೆ‌. ದೆಹಲಿಯಿಂದ ಬಂದ ಇವ್ರನ್ನ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. ನಂತ್ರ ಇವ್ರ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ 43 ವರ್ಷದ ಮಹಿಳೆಯಲ್ಲಿ ಕೊರೋನಾ ಖಚಿತವಾಗಿದೆ. ಜೂನ್ 20 ರಂದು ಕೊರೋನಾ ದೃಢವಾಗುತ್ತಿದ್ದಂತೆ ಆಕೆಯನ್ನ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಯಿತು. ಮಹಿಳೆ ಕೆಮ್ಮು, ಜ್ವರದಿಂದ ಬಳಲುತ್ತಿದ್ದಳು. ಕಳೆದ 6 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಆಕೆ ಶುಕ್ರವಾರ ಮಧ್ಯರಾತ್ರಿ ಮೃತಪಟ್ಟಿದ್ದಾಳೆ. ಮೃತ ಮಹಿಳೆಯ 48 ವರ್ಷದ ಗಂಡನಿಗೂ ಗುರುವಾರ ರಾತ್ರಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಆತನೂ ಕೂಡಾ ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊರೋನಾದಿಂದ ಮಹಿಳೆ ಮೃತಪಟ್ಟಿರುವ ಬಗ್ಗೆ ಕೆಜಿಎಫ್ ತಹಸೀಲ್ದಾರ್ ರಮೇಶ್ ಅವರು ಸ್ಪಷ್ಟಪಡಿಸಿದ್ದು, ಕೋವಿಡ್ 19 ನಿಯಮಾವಳಿಗಳಂತೆ ಅಂತ್ಯಕ್ರಿಯೆ ನಡೆಸಲಾಗುವುದು ಅಂತಾ ಹೇಳಿದ್ರು.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

RELATED ARTICLES

Related Articles

TRENDING ARTICLES