ಮಂಡ್ಯ: ಆಷಾಢ ಮಾಸವನ್ನು ಶೂನ್ಯ ಮಾಸವೆಂದರೂ ಇದೊಂದು ಪವಿತ್ರ ಮಾಸ. ಈ ಮಾಸದಲ್ಲಿ ದೇವರನ್ನು ಪೂಜಿಸಿದರೆ ಬಯಕೆಗಳು ಈಡೇರುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ, ಆಷಾಢ ಶುಕ್ರವಾರ ಬಂದ್ರೆ ಸಾಕು ಹೆಣ್ಣು ದೇವತೆಗಳಿಗೆ, ಅದರಲ್ಲೂ ಚಾಮುಂಡೇಶ್ವರಿ ದೇವಿ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸೋದು ಸಹಜ.
ಈ ಮಾಸದಲ್ಲಿ ಚಾಮುಂಡೇಶ್ವರಿ ಸೇರಿದಂತೆ ಲಕ್ಷ್ಮೀ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಇನ್ನು ಭಕ್ತರು ಕೂಡ ಆಷಾಢ ಮಾಸದ ಶುಕ್ರವಾರದ ಪೂಜೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುತ್ತಾರೆ. ಈ ಮಾಸದಲ್ಲಿ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಕೂಡ ಮಾಡಲಾಗುತ್ತೆ.
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ನೋಡೋದೆ ಸೊಗಸು ಅದರಲ್ಲೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಚಾಮುಂಡೇಶ್ವರಿ ದೇವಾಲಯದಲ್ಲಿ ದೇವರ ಅಲಂಕಾರ ನೋಡುವುದೇ ಒಂದು ಸೊಗಸು. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ದೇವಾಲಯದಲ್ಲಿ ದೇವರು ಮತ್ತು ಗರ್ಭಗುಡಿಯನ್ನ ವಿಶೇಷವಾಗಿ ಅಲಂಕರಿಸಲಾಗುತ್ತಿದೆ. ಆಷಾಢ ಮಾಸದ ಪ್ರತಿ ಶುಕ್ರವಾರ ಈ ದೇವಾಲಯದಲ್ಲಿ ವಿಭಿನ್ನ ಮತ್ತು ವಿಶೇಷ ಅಲಂಕಾರ ಇರುತ್ತೆ. ಈ ವಿಶೇಷ ಅಲಂಕಾರ ನೋಡೋಕೆ ಜನ ಸಾಗರವೇ ಸೇರುತ್ತೆ.
ದೇವಾಲಯದ ಅರ್ಚಕ ಲಕ್ಷ್ಮೀಶ್ ನೇತೃತ್ವದಲ್ಲಿ ಪ್ರತಿ ಆಷಾಢದ ಶುಕ್ರವಾರ ದೇವಿ ಮತ್ತು ಗರ್ಭ ಗುಡಿ ವಿಶೇಷ ಅಲಂಕಾರದಿಂದ ಕಂಗೊಳಿಸುತ್ತೆ.
ಸೌತೆಕಾಯಿಗಳಿಂದ ವಿಶೇಷ ಅಲಂಕಾರ..!
ಈ ಬಾರಿ ಆಷಾಢ ಮಾಸದ ಮೊದಲ ಶುಕ್ರವಾರ ಹಿನ್ನೆಲೆ ದೇವಿ ಮತ್ತು ಗರ್ಭಗುಡಿಯನ್ನ ಸೌತೆಕಾಯಿಗಳಿಂದ ವಿಶೇಷವಾಗಿ ಅಲಂಕರಿಸಲಾಗಿದೆ. ನೂರಾರು ಸೌತೆಕಾಯಿಗಳಿಂದ ದೇವಿ ಸೇರಿದಂತೆ ಗರ್ಭಗುಡಿಯನ್ನ ಅಲಂಕಾರ ಮಾಡಲಾಗಿದ್ದು, ಸೌತೆಕಾಯಿ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿಯನ್ನು ಭಕ್ತಗಣ ಕಣ್ತುಂಬಿಕೊಳ್ತಿದೆ.
ಈ ವಿಶೇಷ ಅಲಂಕಾರ ಇದೇ ಮೊದಲೇನಲ್ಲ:
ಈ ರೀತಿಯ ವಿಶೇಷ ಅಲಂಕಾರ ಇದೇ ಮೊದಲೇನಲ್ಲ. ಹಿಂದಿನಿಂದಲೂ ಈ ರೀತಿಯ ವಿಭಿನ್ನ, ವಿಶೇಷ ಅಲಂಕಾರಕ್ಕೆ ಈ ದೇವಾಲಯ ಸಾಕ್ಷಿಯಾಗಿದೆ. ವಿವಿಧ ಮಾದರಿಯ ನೋಟುಗಳು, ವಿವಿಧ ಬಗೆಯ ಹಣ್ಣುಗಳು, ಚಕ್ಕುಲಿ, ಕಜ್ಜಾಯ, ಕೋಡುಬಳೆಯಂತಹ ತಿಂಡಿ ತಿನಿಸುಗಳು, ವೀಳ್ಯದೆಲೆ, ಬಾಳೆ ಎಲೆ ಸೇರಿದಂತೆ ಹಲವು ರೀತಿಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂದೆ ಇನ್ಯಾವ ಬಗೆಯ ವಿಶೇಷ ಅಲಂಕಾರ ನಡೆಯುತ್ತೆ ಅನ್ನೋದು ಪ್ರತಿ ಆಷಾಢ ಮಾಸದ ಪ್ರತಿ ಶುಕ್ರವಾರ ಇಲ್ಲಿನ ಭಕ್ತರ ಕಾತುರಕ್ಕೆ ಕಾರಣವಾಗಿದೆ.
ಈ ವಿಶೇಷ ಅಲಂಕಾರ ನೋಡೋಕೆ ಶ್ರೀರಂಗಪಟ್ಟಣ, ಮಂಡ್ಯ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ದೇವಿ ದರ್ಶನಕ್ಕೂ ಕೊರೋನಾ ಭೀತಿ:
ಪ್ರತಿ ವರ್ಷ ವಿಶೇಷವಾಗಿ ಅಲಂಕೃತಳಾದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸೋಕೆ ಸಾವಿರಾರು ಭಕ್ತರು ಬಂದು ಹೋಗ್ತಿದ್ರು. ಆದರೆ, ಈ ಭಾರಿ ಕೊರೋನಾ ವೈರಸ್ ಇಡೀ ವಿಶ್ವವವನ್ನೇ ತಲ್ಲಣಗೊಳಿಸಿರುವ ಕಾರಣ ಈ ಸಲ ಭಕ್ತರ ಆಗಮನದ ಸಂಖ್ಯೆ ಇಳಿಮುಖವಾಗಿದೆ. ಇಲ್ಲಿನ ದೇವಾಲಯದ ಆಡಳಿತ ಮಂಡಳಿ ಮತ್ತು ಅರ್ಚಕರು ಕೂಡ ದೂರದೂರಿನ ಭಕ್ತರು ಮನೆಯಿಂದಲೇ ದೇವರನ್ನ ಪ್ರಾರ್ಥಿಸಿಕೊಳ್ಳುವಂತೆ ಮನವಿಮಾಡಿದ್ದಾರೆ.
…..
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.