Monday, January 13, 2025

ಚಾಮರಾಜನಗರದಲ್ಲಿ ಸೋಂಕಿತರ ಸಂಖ್ಯೆ 22 | ಗಡಿಜಿಲ್ಲೆಗೆ ಕಾದಿದ್ಯಾ ಆಪತ್ತು..?

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಸೇರಿ ಇಂದು 10 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಬಂದಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿದ್ದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

ಗುಂಡ್ಲುಪೇಟೆಯ ಮಹಾದೇವಪ್ರಸಾದ ನಗರ, ಕನಕದಾಸನಗರ, ಗಾಡಿ ಕಾರ್ಖಾನೆ ಬಡಾವಣೆಯ ವ್ಯಕ್ತಿಗಳಿಗೆ ಸೋಂಕು ತಗುಲಿದ್ದು ಗುಂಡ್ಲುಪೇಟೆ ಪೊಲೀಸ್ ಠಾಣೆಯನ್ನು ಈಗಾಗಲೇ ಸೀಲ್ ಡೌನ್ ಮಾಡಲಾಗಿದೆ‌.

ಇನ್ನೂ ಚಾಮರಾಜನಗರದ ಚೆಸ್ಕಾಂನ 40 ವರ್ಷದ ಸಿಬ್ಬಂದಿಗೆ ವೈರಸ್ ಅಟಕಾಯಿಸಿದ್ದು ಈಗಾಗಲೇ ಶಂಕರಪುರ ಬಡಾವಣೆಯ 5 ನೇ ಕ್ರಾಸನ್ನು ಸೀಲ್ ಡೌನ್ ಮಾಡಲಾಗಿದ್ದು 100 ಮೀ.ನ್ನು ಬಫರ್ ಜೋನ್ ಆಗಿ ಮಾಡಲಾಗಿದೆ.

ಗುಂಡ್ಲುಪೇಟೆಯಲ್ಲಿ 17 ಮಂದಿ, ಚಾಮರಾಜನಗರದಲ್ಲಿ 3 ಹಾಗೂ ಕೊಳ್ಳೇಗಾಲದಲ್ಲಿ 1 ಹಾಗೂ ಗುಣಮುಖನಾಗಿರುವ ವ್ಯಕ್ತಿ ಸೇರಿದಂತೆ ಜಿಲ್ಲೆಯಲ್ಲಿ 22 ಪ್ರಕರಣಗಳಾಗಿದೆ ಎಂದು ತಿಳಿದುಬಂದಿದೆ.

ಗುಂಡ್ಲುಪೇಟೆ ಮಹಾದೇವಪ್ರಸಾದನಗರದಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಭೀತಿ ಎದುರಾಗಿದ್ದು ಗಡಿಜಿಲ್ಲೆ ಜನರು ತಲ್ಲಣಿಸುತ್ತಿದ್ದಾರೆ. 8 ದಿನಗಳ ಅಂತರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 22 ಕ್ಕೇರಿದ್ದು ಗಡಿಜಿಲ್ಲೆಗೆ ಆಪತ್ತು ಕಾದಿರುವ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.

RELATED ARTICLES

Related Articles

TRENDING ARTICLES