ಚಾಮರಾಜನ; ಪರೀಕ್ಷಾ ಕೇಂದ್ರಕ್ಕೆ ತೆರಳುವ ಭರದಲ್ಲಿ ಚಾಮರಾಜನಗರದ ವಿದ್ಯಾರ್ಥಿನಿಯೊಬ್ಬಳು ಬಿದ್ದು ಹಣೆಗೆ ಗಾಯಮಾಡಿಕೊಂಡು ಪರೀಕ್ಷೆ ಬರೆಯಲು ಬಂದು ಪರೀಕ್ಷೆ ಕೇಂದ್ರದಲ್ಲಿ ಅಸ್ವಸ್ಥವಾಗಿರುವ ಘಟನೆ ನಡೆದಿದೆ.
ಚಾಮರಾಜನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ ಬೀಬಿ ಹಾಜೀರ ಎಂಬ ವಿದ್ಯಾರ್ಥಿ ಬಿದ್ದು ಗಾಯಗೊಂಡಿದ್ದು, ಪರೀಕ್ಷೆ ಬರೆಯಲು ಬರುವ ಭಯದಲ್ಲಿ ಮನೆಯ ಬಳಿ ಬಿದ್ದು ಹಣೆಗೆ ಗಾಯ ಮಾಡಿಕೊಂಡಿದ್ದರು. ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಪೋಷಕರೊಂದಿಗೆ ಕೇಂದ್ರಕ್ಕೆ ಬಂದ ವಿದ್ಯಾರ್ಥಿನಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಾಗುವ ವೇಳೆ ಮತ್ತೇ ಅಸ್ವಸ್ಥಗೊಂಡಿದ್ದಾಳೆ.
ವಿದ್ಯಾರ್ಥಿನಿಗೆ ಸ್ಥಳದಲ್ಲೇ ಇದ್ದ ಆರೋಗ್ಯ ಸಹಾಯಕಿ ಚಿಕಿತ್ಸೆ ನೀಡಿದರು. ಪರಿಶೀಲನೆಗೆಂದು ಈ ವೇಳೆ ಕೇಂದ್ರಕ್ಕೆ ಬಂದ ಡಿಸಿ ರವಿ, ಎಸ್ಪಿ ಆನಂದ್ ಕುಮಾರ್ ಅವರು ಅಸ್ವಸ್ಥಗೊಂಡ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಭಯವಾದರೆ ಮುಂದಿನ ಬಾರಿ ಪರೀಕ್ಷೆ ಬರೀ ಈಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ತೆಗೆದುಕೊ ಎಂದು ಸಲಹೆ ನೀಡಿದರು.
ಈ ವೇಳೆ ವಿದ್ಯಾರ್ಥಿನಿ ಪರೀಕ್ಷೆ ಬರೆಯಲೇಬೇಂದು ಡಿಸಿ ರವಿಗೆ ತಿಳಿಸಿದಾಗ ಚಿಕಿತ್ಸೆ ಪಡೆದು ಚೇತರಿಕೆ ಕಂಡರೆ ಪರೀಕ್ಷೆ ಬರೆಯಲು ತಿಳಿಸಿ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು.
ಇನ್ನೂ ಇಂದಿನ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯನ್ನು ಗೈರು ಎಂದು ಪರಿಗಣಿಸಲಾಗಿದ್ದು, ಮುಂದಿನ ಪರೀಕ್ಷೆಯನ್ನು ವಿದ್ಯಾರ್ಥಿನಿ ಬರೆಯಬಹುದು ಎಂದು ಡಿಡಿಪಿಐ ಸ್ಪಷ್ಟ ಪಡಿಸಿದ್ದಾರೆ.