ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ರಾತ್ರೋ ರಾತ್ರಿ ವದಂತಿಯೊಂದು ಹಬ್ಬಿದೆ. ಹಳೆ ಮಾಡೆಲ್ನ ಬ್ಲಾಕ್ & ವೈಟ್ ಟಿವಿಗೆ ಲಕ್ಷ ಲಕ್ಷ ಕೊಡ್ತಾರೆ ಅನ್ನೋ ವದಂತಿ ಹಬ್ಬಿದ್ದು, ಜಿಲ್ಲೆಯ ಜನರು ಹಳೆ ಕಾಲದ ಬ್ಲಾಕ್ & ವೈಟ್ ಟಿವಿ ಹಿಂದೆ ಬಿದ್ದಿದ್ದಾರೆ. ಸಾಮಾಜಿಕ ಜಾಲ ತಾಣ ಸೇರಿದಂತೆ ಫೋನ್ ಮೂಲಕ ಹಳೆ ಕಾಲದ ಕಪ್ಪು ಬಿಳಿಪು ಟಿವಿಯ ಹುಡುಕಾಟ ಹೆಚ್ಚಾಗಿದೆ.
ಹೌದು! ನಿನ್ನೆ ಮಧ್ಯಾಹ್ನದಿಂದ ಜಿಲ್ಲೆಯ ಜನರ ಮೊಬೈಲ್ ವಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವಾಗಿ ಭಾರೀ ಚರ್ಚೆ ಶುರುವಾಗಿದೆ. ಯಾರ ಬಳಿಯಾದ್ರು ಹಳೆಯ ಬ್ಲಾಕ್ & ವೈಟ್ ಟಿವಿ ಇದೆಯಾ ಎಂದು ಚರ್ಚೆ ಆರಂಭಗೊಂಡಿದ್ದು? ಯಾಕೆ? ಏನು? ಎಷ್ಟು ರೇಟ್? ಎಂಬೆಲ್ಲಾ ಚರ್ಚೆಗಳು ನಡೆಯುತ್ತಿವೆ. ಅಲ್ದೆ, ಕೆಲವರು ಸ್ನೇಹಿತರು ಮತ್ತು ಸಂಬಂಧಿಕರಿಗೆ ಖುದ್ದು ಫೋನ್ ಮಾಡಿ ಹಳೆಯ ಕಾಲದ ಟಿವಿ ಬಗ್ಗೆ ವಿಚಾರಿಸುತ್ತಿದ್ದಾರೆ.
ಹಳೆಯ ಟಿವಿ ಇದ್ರೆ ಕೊಡಿ, ಬೇಕು ಅಂತಿದ್ದಾರೆ. ವಾಟ್ಸಾಪ್ ಗ್ರೂಪ್ ನಲ್ಲಿ ಮಾತ್ರ ಈ ಬ್ಲಾಕ್ & ವೈಟ್ ಟಿವಿಗೆ ಲಕ್ಷ ಲಕ್ಷ ಕೊಡ್ತಾರೆ ಅಂತಿದ್ದಾರೆ. ಅದ್ರಲ್ಲೂ ಹಳೆಯ ಕಾಲದ ಡೋರ್ ಇರೋ ಬ್ಲಾಕ್ & ವೈಟ್ ಟಿವಿಗೆ ಬರೋಬ್ಬರಿ 10 ಲಕ್ಷ ಕೊಡ್ತಾರಂತೆ ಅನ್ನೋ ವದಂತಿ ಕೂಡ ಹರಿದಾಡ್ತಿದೆ.
ಇನ್ನು ಈ ವದಂತಿಯಿಂದಾಗಿ ಜಿಲ್ಲೆಯ ಹಳ್ಳಿಗಳಲ್ಲಿ ಕೆಲವರು ಕಪ್ಪುಬಿಳುಪು ಟಿವಿ ಹುಡುಕಾಟ ನಡೆಸ್ತಿದ್ದಾರೆ. ಕೆಲವೊಂದು ಹಳ್ಳಿಯ ಕೆಲವರು ತಮ್ಮ ಮನೆಯಲ್ಲಿದ್ದ ಹಳೆಯ ಟಿವಿಯನ್ನು ಐನೂರು ಅಥವಾ ಸಾವಿರಕ್ಕೆ ಕೊಟ್ಟು ಬಿಟ್ಟಿದ್ದಾರೆ. ಇದೀಗ ಈ ಸುದ್ದಿ ತಿಳಿದು ಆ ಜನರು ಪರಿತಪಿಸುತ್ತಿದ್ದಾರಂತೆ. ಈ ಟಿವಿ ಹುಡುಕಾಟದ ಹಿಂದೆ ಕೆಲ ಸರ್ಕಾರಿ ನೌಕರರು ಕೂಡ ಬಿದ್ದಿದ್ದು ತಮ್ಮ ಸ್ನೇಹಿತರೊಬ್ಬರಿಗೆ ಇಂತಹ ಟಿವಿಗಳು ಬೇಕಿದೆ, ಇದೆಯಾ? ಎಂದು ಸ್ನೇಹಿತರ ಬಳಿ ವಿಚಾರಿಸುತ್ತಿದ್ದಾರೆ. ಟಿವಿ ಸರ್ವಿಸ್ ಮಾಡೋರ ಬಳಿ ಕೂಡ ಹಳೆಯ ಟಿವಿ ಬಗ್ಗೆ ಕೆಲವರು ವಿಚಾರಿಸಿದ್ದಾರೆ. ಆದ್ರೆ ಈ ತರಹ ಟಿವಿಗಳು ಸಿಗದೇ ಇದ್ದು, ಜನರು ಮಾತ್ರ ಮತ್ತಷ್ಟು ಕುತೂಹಲದಿಂದ ಇದರ ಹುಡುಕಾಟದಲ್ಲಿದ್ದಾರೆ. ಈ ಬಗ್ಗೆ ಟಿವಿ ಸರ್ವಿಸ್ ಮಾಡೋ ಪರಿಣಿತರು ಇದು ವದಂತಿ ಆದ್ರೂ ಆ ಹಳೆಯ ಕಾಲದ ಟಿವಿಯಲ್ಲಿ ಕೆಲವೊಂದು ಭಾಗದಲ್ಲಿ ಬೆಲೆ ಬಾಳುವ ಲೇಪನ ವೈರ್ ಹಾಗೂ ಇನ್ನಿತರ ಭಾಗಗಳು ಇರುತ್ತದೆ ಆ ಕಾರಣಕ್ಕೆ ಹುಡುಕುತ್ತಿರಬಹುದು. ಆದ್ರೆ ಇದಕ್ಕೆ ಲಕ್ಷ ಲಕ್ಷ ಯಾಕೆ ಕೊಡ್ತಾರೆ? ಯಾರು ಕೊಡ್ತಾರೆ? ಇದು ನಿಜನೋ ಸುಳ್ಳೋ ಅನ್ನೋದು ಗೊತ್ತಿಲ್ಲ ಅಂತಿದ್ದಾರೆ.
ಒಟ್ಟಾರೆ, ಈ ಹಳೆಯ ಕಾಲದ ಟಿವಿಗೆ ಲಕ್ಷ ಲಕ್ಷ ಕೊಡಲಾಗ್ತಿದೆ ಅನ್ನೋ ವದಂತಿ ಹಿಂದೆ ಇರೋ ಅಸಲಿ ಸತ್ಯ ಮಾತ್ರ ಏನೆಂದು ಯಾರಿಗೂ ತಿಳಿಯದಾಗಿದೆ. ಈ ವದಂತಿಯಿಂದಾಗಿ ಜಿಲ್ಲೆಯ ಜನರು ಹಳೆಯ ಟಿವಿ ಹಿಂದೆ ಬಿದ್ದಿದ್ದು, ಹುಡು ಕಾಟದಲ್ಲಿದ್ದಾರೆ. ಇದು ವಂದಂತಿಯೋ? ಇಲ್ಲ ಸತ್ಯವೋ? ಅನ್ನೋ ಗೊಂದಲದಲ್ಲಿ ಜನರು ಇದ್ದಾರೆ. ಈ ವದಂತಿ ಸಾಕಷ್ಟು ವೈರಲ್ ಆಗಿ ಜಿಲ್ಲೆಯಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿರೋದಂತು ಸುಳ್ಳಲ್ಲ.
ಡಿ.ಶಶಿಕುಮಾರ್, ಪವರ್ ಟಿವಿ, ಮಂಡ್ಯ.