ಧಾರವಾಡ : 14-ಜೂನ 15 2016 ರಲ್ಲಿ ಧಾರವಾಡದ ಸಪ್ತಾಪುರದಲ್ಲಿನ ಉದಯ ಜಿಮ್ ನಲ್ಲಿ ಕೊಲೆಗೀಡಾಗಿದ್ದ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಸಿ ಬಿ ಐ ತನಿಖೆ ಮುಂದುವರೆದಿದೆ. ಯೋಗೀಶಗೌಡ ಕೊಲೆಯಾಗಿ ನಾಳೆಗೆ ನಾಲ್ಕು ವರ್ಷ. ಹುಬ್ಬಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರದಿಂದ ಬಿಜೆಪಿ ಸದಸ್ಯನಾಗಿ ಆಯ್ಕೆಯಾಗಿದ್ದ ಯೋಗೀಶಗೌಡ ಗೌಡರರನ್ನು ಜೂನ 15 ರ ಬೆಳ್ಳಂ ಬೆಳಿಗ್ಗೆ ಕೊಚ್ಚಿ ಕೊಲೆ ಮಾಡಲಾಗಿತ್ತು.
ಯೋಗೀಶಗೌಡನ ಕೊಲೆ ರಾಜ್ಯದಾಧ್ಯಂತ ಸದ್ದು ಮಾಡಿತ್ತು. ರಾಜ್ಯದಾಧ್ಯಂತ ಬಿಜೆಪಿ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಯೋಗೀಶಗೌಡನ ಕೊಲೆ ಹಿಂದೆ ಪ್ರಭಾವಿ ರಾಜಕಾರಣಿಯ ಕೈವಾಡವಿದೆ ಎಂದು ಆರೋಪಗಳು ಕೇಳಿ ಬಂದಿದ್ದವು. ಇದು ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿತ್ತು. ಕೊಲೆ ಪ್ರಕರಣವನ್ನು ಸಿ ಬಿ ಐ ತನಿಖೆಗೆ ಒಪ್ಪಿಸಬೇಕೆಂದು ಸ್ವತಹ ಈಗಿನ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗ ಪ್ರತಿಪಕ್ಷದ ನಾಯಕರಿದ್ದಾಗ ಆಗ್ರಹಿಸಿದ್ದರು. ಕಳೆದ ವರ್ಷ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಗೀಶಗೌಡ ಕೊಲೆ ಪ್ರಕರಣವನ್ನು ಸಿ ಬಿ ಐ ಗೆ ಒಪ್ಪಿಸಿದೆ. ತನಿಖೆ ಕೈಗೊಂಡಿರುಗ ಸಿ ಬಿ ಐ 6 ಜನ ಅಸಲಿ ಹಂತಕರನ್ನು ಹೆಡಮುರಿಗೆ ಕಟ್ಟಿ ಕಂಬಿ ಹಿಂದೆ ಹಾಕಿದೆ.
ಇದಕ್ಕೂ ಮೊದಲು ಕೊಲೆಯಾದ ವಾರದಲ್ಲಿ ಜಯ ಕರ್ನಾಟಕ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷ ಬಸವರಾಜ ಮುತ್ತಗಿ ಸೇರಿದಂತೆ 5 ಜನ ಕೊಲೆ ಮಾಡಿದ್ದಾರೆಂದು ಆರೋಪಿಸಿ ಹುಬ್ಬಳ್ಳಿ ಧಾರವಾಡದ ಪೊಲೀಸರು 5 ಜನ ಆರೋಪಿಗಳನ್ನ ಬಂಧಿಸಿದ್ದರು. ಯಾವಾಗ ಸಿ ಬಿ ಐ ಫಿಲ್ಡಿಗೆ ಇಳಿಯಿತೋ ಬೆಂಗಳೂರು ಹಾಗೂ ಆಂದ್ರ ಮೂಲದ 6 ಜನ ಅಸಲಿ ಹಂತಕರನ್ನು ಬಂಧಿಸಿದೆ.
ಸಧ್ಯ ಧಾರವಾಡದಲ್ಲಿಯೇ ಬೀಡು ಬಿಟ್ಟಿರುವ ಸಿ ಬಿ ಐ ತಂಡ ಅಸಲಿ ಹಂತಕರ ಮೇಲೆ ಚಾರ್ಜ್ ಶೀಟ ಸಲ್ಲಿಸಿದ ಮೇಲೆಯೂ ತನಿಖೆ ಚುರುಕುಗೊಳಿಸಿದೆ. ಇದುವರೆಗೆ ನೂರಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿರುವ ಸಿ ಬಿ ಐ ಪ್ರಕರಣದ ಆಳಕ್ಕೆ ಇಳಿಯುತ್ತಿದೆ. ಉಪನಗರ ಪೊಲೀಸ ಠಾಣೆಯಲ್ಲಿ ಒಬ್ಬೊಬ್ಬರನ್ನೇ ಕರೆಸಿ ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆ ಹಿಂದೆ ಇರುವ ಕೈವಾಡ ಯಾರದು ಎಂಬುದನ್ನು ಭೇಧಿಸಲು ಟೊಂಕಕಟ್ಟಿ ನಿಂತಿದೆ.