ಹ್ಯಾಮಿಲ್ಟನ್ : ಇಲ್ಲಿನ ಸೆಡ್ಡಾನ್ ಪಾರ್ಕ್ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಮೂರನೇ ಟಿ ಟ್ವೆಂಟಿ ಪಂದ್ಯ ರೋಚಕತೆಗೆ ಸಾಕ್ಷಿಯಾಯಿತು.
ಟಾಸ್ ಸೂತರೂ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ರೋಹಿತ್ ಶರ್ಮಾ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 178 ರನ್ ಗಳಿಸಿತು. ಭಾರತದ ನೀಡಿದ 179 ರನ್ ಗುರಿಯನ್ನು ಬೆನ್ನತ್ತಿದ ಆತಿಥೇಯ ಕಿವೀಸ್ಗೆ ನಾಯಕ ಕೇನ್ ವಿಲಿಯಮ್ಸನ್ ನೆರವಾದರು. ಭರ್ಜರಿ ಬ್ಯಾಟಿಂಗ್ ನಡೆಸಿದ ಕೇನ್ ವಿಲಿಯಮ್ಸನ್ (95 ರನ್ ) ಕಿವೀಸ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದಿದ್ದರೂ ಅಂತಿಮ ವಿಜಯ ಭಾರತಕ್ಕೆ ದಕ್ಕಿತು.
ಪಂದ್ಯ ಟೈ ಆದ್ದರಿಂದ ಅಂಪೈರ್ಗಳು ಸೂಪರ್ ಓವರ್ ಮೊರೆ ಹೋದರು. ಕಿವೀಸ್ ಪರ್ ಬ್ಯಾಟಿಂಗ್ಗೆ ಇಳಿದ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಫ್ಟಿಲ್, ಎರಡು ಫೋರ್ ಮತ್ತು ಒಂದು ಸಿಕ್ಸರ್ ನೆರವಿನಿಂದ 17 ರನ್ ಗಳಿಸಿದರು. ಗುರಿ ಬೆನ್ನತ್ತಿದ ರೋಹಿತ್ ಮತ್ತು ರಾಹುಲ್ ಜೋಡಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸಿಡಿಸಿ ಭಾರತದ ಮುಡಿಗೆ ಗೆಲುವಿನ ಕಿರೀಟವನ್ನು ಮುಡಿಸಿದರು. ಭಾರತದ ಪರ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ ಶರ್ಮಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.