ಬೆಂಗಳೂರು: ಪ್ರಶಸ್ತಿ ಗೆಲ್ಲಲು ಸರಣಿ ನಿರ್ಣಾಯಕ ಪಂದ್ಯದಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಿದ ‘ಹಿಟ್‌ಮ್ಯಾನ್’ ಖ್ಯಾತಿಯ ರೋಹಿತ್ ಶರ್ಮ ವೃತ್ತಿ ಬದುಕಿನ 29ನೇ ಒಡಿಐ ಶತಕ ಬಾರಿಸಿ ಟೀಮ್ ಇಂಡಿಯಾಗೆ ನೆರವಾದರು
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸತತ ಮೂರನೇ ಬಾರಿ ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ತಂಡದ ನಿರ್ಧಾರ ಸಮರ್ಥಿಸಿದ ಸ್ಟೀವ್ ಸ್ಮಿತ್ (131) ಶತಕ ದಾಖಲಿಸಿ ತಂಡಕ್ಕೆ ಬೃಹತ್ ಮೊತ್ತ ತಂದುಕೊಡುವತ್ತ ಮುನ್ನುಗ್ಗಿದ್ದರಾದರೂ, ಕಮ್‌ಬ್ಯಾಕ್ ಮಾಡಿದ ಭಾರತೀಯ ಬೌಲರ್‌ಗಳು ಡೆತ್ ಓವರ್‌ಗಳಲ್ಲಿ ಆಸ್ಟ್ರೇಲಿಯ ಬ್ಯಾಟಿಂಗ್ ಬೆನ್ನೆಲುಬು ಮುರಿದು 50 ಓವರ್‌ಗಳಲ್ಲಿ 286/9 ಕ್ಕೆ ನಿಯಂತ್ರಿಸಿದರು.
ಆಸ್ಟ್ರೇಲಿಯ ನೀಡಿದ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡ 37 ಓವರ್‌ಗಳ ಮುಕ್ತಾಯಕ್ಕೆ 2 ವಿಕೆಟ್ ನಷ್ಟದಲ್ಲಿ 202 ರನ್ ಗಳಿಸಿ ಗೆಲುವಿನತ್ತ ದಾಪುಗಾಲಿಟ್ಟಿತ್ತು. ರೋಹಿತ್ ಅದ್ಭುತ ಶತಕದೊಂದಿಗೆ ತಂಡವನ್ನು ಗುರಿ ಮುಟ್ಟಿಸುವ ಜವಾಬ್ದಾರಿ ಹೊತ್ತರೆ ಅವರಿಗೆ ನಾಯಕ ವಿರಾಟ್ ಕೋಹ್ಲಿ ಅವರಿಗೆ ಸಾಥ್ ನೀಡಿದ್ದರು. ಇದಕ್ಕೂ ಮುನ್ನ ರೋಹಿತ್ ಶರ್ಮ ಕೇವಲ ನಾಲ್ಕು ರನ್ ಗಳಿಸಿ, ಓಡಿಐ ಕ್ರಿಕೆಟ್ನಲ್ಲಿ ಅತ್ಯಂತ ವೇಗವಾಗಿ 9000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.