ಬೆಂಗಳೂರು: ಭಾರತದಿಂದ ಭಾರೀ ಮೊತ್ತದ ಕಪ್ಪು ಹಣ ಹಾಂಗ್ ಕಾಂಗ್ಗೆ ವರ್ಗಾವಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ನೆರವಿನಿಂದ 2014-15ರ ಅವಧಿಯಲ್ಲಿ ಬೆಂಗಳೂರಿನಿಂದ ವಿದೇಶಕ್ಕೆ ಹಣ ವರ್ಗಾವಣೆ ಮಾಡಿದ್ದು, 1038.34 ಕೋಟಿ ಕಪ್ಪು ಹಣ ವಿದೇಶಕ್ಕೆ ವರ್ಗಾವಣೆಯಾಗಿದೆ. ಈ ಅಕ್ರಮ ಪತ್ತೆಯಾಗುತ್ತಿದ್ದಂತೆ 52 ಆರೋಪಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಎಸ್ಬಿಐ ರಾಷ್ಟ್ರೀಕೃತ ಬ್ಯಾಂಕ್ನ 4 ಬ್ರ್ಯಾಂಚ್ಗಳಲ್ಲಿ 48 ಸಂಸ್ಥೆಗಳಿಗೆ ಸಂಬಂಧಿಸಿದಂತೆ 51 ಬ್ಯಾಂಕ್ ಖಾತೆಯನ್ನು ಆರಂಭಿಸಲಾಗಿದ್ದು, ಈ ಖಾತೆಗಳಿಂದ 1038.34 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ. 51 ಖಾತೆಗಳಲ್ಲಿ 24 ಖಾತೆಯಿಂದ ವಿದೇಶಗಳಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳಲು 488 ಕೋಟಿ ಅಡ್ವಾನ್ಸ್ ವರ್ಗಾವಣೆ ಮಾಡಲಾಗಿದ್ದು, ಇನ್ನುಳಿದ 27 ಖಾತೆಗಳಿಂದ 549 ಕೋಟಿ ವರ್ಗಾವಣೆ ಮಾಡಲಾಗಿದೆ.
ವಿದೇಶದಿಂದ ಬೃಹತ್ ಪ್ರಮಾಣದಲ್ಲಿ ವಸ್ತುಗಳ ಆಮದಾಗಿದೆ ಎಂದು ಟ್ರಾವೆಲ್ಸ್ ಸಂಸ್ಥೆಗಳು ನಕಲಿ ದಾಖಲೆಗಳನ್ನು ನೀಡಿದ್ದಲ್ಲದೇ ಇವುಗಳಿಗೆ ಪ್ರತಿಯಾಗಿ ಹಾಂಗ್ ಕಾಂಗ್ಗೆ ಹಣ ವರ್ಗಾವಣೆಯಾಗಿದೆ ಎಂದು ಹೇಳಿದ್ದಾರೆ. ಆದರೆ ನಿಜವಾಗಿ ಇಲ್ಲಿ ಯಾವುದೇ ವ್ಯವಹಾರಗಳು ನಡೆದಿಲ್ಲ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳು ಲಂಚ ಸ್ವೀಕರಿಸಿ ನಕಲಿ ದಾಖಲೆ ಸೃಷ್ಟಿಗೆ ಸಹಾಕರ ನೀಡಿದ್ದಾರೆಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆ ಬೆಂಗಳೂರು ಸಿಬಿಐ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.