Sunday, December 22, 2024

KSRTC ಡ್ರೈವರ್ ಆದ ಶಾಸಕ ರೇಣುಕಾಚಾರ್ಯ!

ದಾವಣಗೆರೆ : ಸದಾ ಒಂದಿಲ್ಲೊಂದು ಸುದ್ದಿಯಲ್ಲಿರೋ ಮಾಜಿ ಸಚಿವ, ಹೊನ್ನಾಳಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮತ್ತೊಮ್ಮೆ ಕೆಎಸ್​ಆರ್​ಟಿಸಿ ಬಸ್ ಓಡಿಸಿದ್ದಾರೆ. 

ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಚಾಲನೆ ನೀಡಿದ ಅವರು, ಸರ್ಕಾರಿ ಬಸ್ ಚಾಲಕನಂತೆ ಸಮವಸ್ತ್ರ ತೊಟ್ಟು ಬೆನಕನಹಳ್ಳಿ ಗ್ರಾಮದಿಂದ ಸಾಸ್ವೆಗಳ್ಳಿ ಗ್ರಾಮದ ವರೆಗೆ ಬಸ್​ ಚಾಲನೆ ಮಾಡಿದ್ದಾರೆ. ಬೀರಗೊಂಡನಹಳ್ಳಿ, ಹಿರೇಬಾಸೂರು, ಹೊಟ್ಯಾಪುರ, ರಾಂಪುರ, ಬಳ್ಳಾಪುರ ಐದಾರು ಹಳ್ಳಿಗಳ ಪ್ರಯಾಣಿಕರನ್ನು ಕೂಗಿ ಕೆಳಗಿಳಿಸಿದ್ದಾರೆ. ಶಾಸಕರ ಈ ನಡೆಗೆ ಒಂದೆಡೆ ಪ್ರಶಂಸೆ ವ್ಯಕ್ತವಾದರೆ, ಇನ್ನೊಂದೆಡೆ ಚರ್ಚೆಗೂ ಗ್ರಾಸವಾಗಿದೆ. ಕೆಎಸ್​ಆರ್​ಟಿಸಿ ನಿಯಮದ ಪ್ರಕಾರ ಹೆವಿ ಬ್ಯಾಡ್ಜ್​ ಲೈಸೆನ್ಸ್​ ಇದ್ದರೆ ಮಾತ್ರ ಬಸ್​ ಚಲಾವಣೆ ಮಾಡಬಹುದಾಗಿದೆ. ಆದರೆ, ರೇಣುಕಾಚಾರ್ಯ ಹೆವಿ ಬ್ಯಾಡ್ಜ್​ ಲೈಸೆನ್ಸ್​ ಇಲ್ಲದೆ ಬಸ್ ಓಡಿಸಿದ್ದಾರೆ ಅಂತ ಟೀಕೆಗಳು ವ್ಯಕ್ತವಾಗಿದೆ. 

ಈ ಬಗ್ಗೆ ಪವರ್ ಟಿವಿಗೆ ಪ್ರತಿಕ್ರಿಯಿಸಿರುವ ಅವರು, ಟ್ರಾಕ್ಟರ್, ಲಾರಿ, ಆಟೋ, ಕ್ಯಾಬ್, ಬಸ್ ಎಲ್ಲಾ ಓಡಿಸಿ ಅನುಭವವಿದೆ. ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳ ತಲುಪಿಸಿದ್ದೇನೆ. ಜನ ಖುಷಿ ಪಟ್ಟಿದ್ದಾರೆ ಅಂತ ಹೇಳಿದ್ದಾರೆ. 

ಈ ಹಿಂದೆ ಅಕ್ಟೋಬರ್​ನಲ್ಲಿ ಸರ್ಕಾರ ಹೊನ್ನಾಳಿ ಕ್ಷೇತ್ರ ವ್ಯಾಪ್ತಿಗೆ ಹೊಸದಾಗಿ ಆರು ಕೆಎಸ್​ಆರ್​ಟಿಸಿ ಬಸ್ ಬಿಟ್ಟಾಗಲೂ ರೇಣುಕಾಚಾರ್ಯ ಬಸ್ ಓಡಿಸಿ ಚಾಲನೆ ನೀಡಿದ್ದರು. ನ್ಯಾಮತಿ ಪಟ್ಟಣದಲ್ಲಿ ಬಸ್ ಹತ್ತಿದ್ದ ಅವರು, ಬೆಂಗಳೂರು – ಶಿವಮೊಗ್ಗ ಬಸ್ ಅನ್ನು ತಾವೇ ಚಲಾಯಿಸಿ ಗಮನಸೆಳೆದಿದ್ದರು. ಅದೇನೇ ಇದ್ದರು ಶಾಸಕರಗಾಗಿ ಇಂಥಾ ಪಬ್ಲಿಕ್ ಸ್ಟೆಂಟೆಲ್ಲಾ ಬೇಕೇ ಅನ್ನೋದು ಬಹುತೇಕರ ಪ್ರಶ್ನೆ. 

 

 

 

RELATED ARTICLES

Related Articles

TRENDING ARTICLES