Monday, May 20, 2024

ಇರುಳಿಗರ ಕ್ಷೌರ ಮಾಡಿಸುವ ಮೂಲಕ ‘ಗ್ರಾಮ ಸೇವೆ’ಗೆ ಚಾಲನೆ

ರಾಮನಗರ: ರಾಜ್ಯದಲ್ಲೇ ಪ್ರಥಮ ಬಾರಿಗೆ ರಾಮನಗರ ಜಿಲ್ಲಾ ವಾರ್ತಾ ಇಲಾಖೆಯು ‘ಗ್ರಾಮ ಸೇವೆ’ ಕಾರ್ಯಕ್ರಮವನ್ನು ಅಳವಡಿಸಿಕೊಂಡು, ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಆರಂಭಿಸಿದೆ. 

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮವನ್ನು ರಾಮದೇವರ ಬೆಟ್ಟದ ಇರುಳಿಗರ ಕಾಲೋನಿಯಲ್ಲಿ ನಡೆಸಲಾಯಿತು. ಈ ವೇಳೆ ಹಲವು ತಿಂಗಳಿಂದ ತಲೆ ಕೂದಲು ಬೆಳೆಸಿಕೊಂಡು ಶುಚಿತ್ವವನ್ನು ಕಾಪಾಡದ ಹತ್ತಾರು ಮಕ್ಕಳು ಜೊತೆಗೆ ನಿವಾಸಿಗಳಿಗೆ ಕ್ಷೌರ, ಸ್ನಾನವನ್ನು ಸಹ ಮಾಡಿಸಿ ಶುಭ್ರವಾಗಿರುವಂತೆ ಜಾಗೃತಿ ಮೂಡಿಸಲಾಯಿತು.


ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆಯನ್ನು ಸಹ ನೀಡಲಾಯಿತು. ರಾತ್ರಿಯಿಡೀ ಗ್ರಾಮದಲ್ಲೇ ಉಳಿದ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಸ್.ಶಂಕರಪ್ಪ ನೇತೃತ್ವದ ತಂಡ, ಸ್ಥಳೀಯರೊಂದಿಗೆ ಬೆರೆತು ಅವರಲ್ಲಿ ಮಾಹಿತಿ ಹಂಚಿಕೊಳ್ಳುವ ಜೊತೆಗೆ ಜಾಗೃತಿ ಮೂಡಿಸಿದರು. ಅಲ್ಲದೆ ಶ್ರೀನಿವಾಸ್ ಹಾಗೂ ಮುತ್ತು ತಂಡದವರಿಂದ ಬೀದಿ ನಾಟಕ, ಗಾಯನ ಕಾರ್ಯಕ್ರಮ ಆಯೋಜಿಸಿ ಸರ್ಕಾರದ ಕಾರ್ಯಕ್ರಮಗಳ ಅರಿವು ಹಾಗೂ ಜಾಗೃತಿ ಮೂಡಿಸಲಾಯಿತು.

ಜಿಲ್ಲೆಯಲ್ಲಿನ ಇರುಳಿಗರ ಕಾಲೋನಿಗಳಿಗೆ ಮೂಲಸೌಕರ್ಯ ಒದಗಿಸಲು ಸಂಬಂಧಿಸಿದ ಇಲಾಖೆಗಳಿಗೆ ವಸ್ತುಸ್ಥಿತಿಯ ವರದಿ ನೀಡುವುದು. ಪರಿಶಿಷ್ಟ ಜಾತಿ, ಪಂಗಡಗಳ ಕಾಯ್ದೆ ಅಡಿ ಹಲವು ಸವಲತ್ತುಗಳಿದ್ದು ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸ್ವಯಂ ಉದ್ಯೋಗ ಕೈಗೊಳ್ಳಲು ಸರ್ಕಾರದಿಂದ ವಿವಿಧ ಸಲವತ್ತುಗಳನ್ನು ನೀಡಲಾಗುತ್ತಿದೆ ಎಂದು ವಾರ್ತಾ ಇಲಾಖೆ ಅಧಿಕಾರಿ ಶಂಕರಪ್ಪ ತಿಳಿಸಿದರು.
ಇತ್ತೀಚಿಗೆ ಇರುಳಿಗರಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚುತ್ತಿವೆ. 12 ವರ್ಷದ ಆಸುಪಾಸಿನ ಮಕ್ಕಳಿಗೆ ಮದುವೆ ಮಾಡುವುದರಿಂದ ಹುಟ್ಟುವ ಮಕ್ಕಳು, ಅಂಗವಿಕಲತೆಗೆ ಒಳಗಾಗುತ್ತವೆ. ಇಂತಹ ಪ್ರಕರಣಗಳು ಮತ್ತೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಸಿದರು.

ಇದೇ ವೇಳೆ ಶೈಕ್ಷಣಿಕ ಜಾಗೃತಿ ಮೂಡಿಸುವುದರ ಮೂಲಕ ಕಾರ್ಯಕ್ರಮದಲ್ಲಿ ಶಾಲೆಗೆ ತೆರಳುತ್ತಿರುವ ಇರುಳಿಗ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್ ವಿತರಣೆ ಮಾಡಲಾಯಿತು.

RELATED ARTICLES

Related Articles

TRENDING ARTICLES