ನವದೆಹಲಿ : 2050ರ ವೇಳೆಗೆ ಮುಂಬೈ, ಕೋಲ್ಕತ್ತಾ ಸೇರಿದಂತೆ ಅನೇಕ ನಗರಗಳು ವಿಶ್ವ ಭೂಪಟದಿಂದ ಕಾಣೆಯಾಗಲಿವೆ ಎಂಬ ಆಘಾತಕಾರಿ ವಿಷಯವೊಂದು ಸಂಶೋಧನೆಯಿಂದ ತಿಳಿದುಬಂದಿದೆ.
ಅಮೆರಿಕಾದ ನ್ಯೂಜೆರ್ಸಿಯ `ಕ್ಲೈಮೇಟ್ ಸೆಂಟ್ರಲ್’ ಎಂಬ ಸಂಶೋಧನಾ ಸಂಸ್ಥೆ ನೀಡಿರುವ ವರದಿ `ನೇಚರ್ ಕಮ್ಯೂನಿಕೇಷನ್ಸ್’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ವಿಶ್ವದ ನಾನಾ ನಗರಗಳು ಮುಳುಗಡೆಯಾಗುವ ಕಾಲ ಸನ್ನಿಹಿತವಾಗಿದೆ.
ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಸಾಗರದ ನೀರಿನ ಮಟ್ಟ ಏರಿಕೆಯಾಗುತ್ತದೆ. ಹೀಗಾಗಿ ಜಗತ್ತಿನ ಅನೇಕ ಭೂ ಪ್ರದೇಶಗಳನ್ನು ಸಾಗರ ಆಹುತಿ ಪಡೆಯಲಿದೆ. ಈ ವೇಗ ನಿರೀಕ್ಷೆಗೂ ಮೀರಿದ್ದು, ಅಂದಾಜು ಮಾಡಿದ್ದಕ್ಕಿಂತಲೂ ನೀರಿನ ಮಟ್ಟ ಏರಿಕೆಯಾಗಿ ಭೂಪ್ರದೇಶಗಳು ಮುಳುಗಡೆಯಾಗಲಿವೆ ಎಂದು ಸಂಶೋಧನಾ ವರದಿ ತಿಳಿಸಿದೆ.
30 ವರ್ಷಗಳಲ್ಲಿ ವಾಣಿಜ್ಯ ನಗರಿ ಮುಂಬೈ, ಕೋಲ್ಕತ್ತಾ ಸೇರಿದಂತೆ ವಿಯೆಟ್ನಾಮಿನ ಹೋ ಚಿ ಮಿನ್ ನಗರ, ಥಾಯ್ಲೆಂಡಿನ ಬ್ಯಾಂಕಾಕ್, ಚೀನಾದ ಶಾಂಘೈ, ಈಜಿಫ್ಟಿನ ಅಲೆಕ್ಸಾಂಡ್ರಿಯಾ, ಇರಾಕಿನ ಬಾಸ್ರಾ ಮೊದಲಾದ ನಗರಗಳು ಮುಳುಗಡೆ ಆಗಲಿವೆ. ಇದರಿಂದ 15 ಕೋಟಿ ಮಂದಿ ಸಂತ್ರಸ್ತರಾಗಲಿದ್ದಾರೆ. ಅಂದ್ರೆ, ಅಪಾಯಯದಂಚಿನಲ್ಲಿರುವ ಪ್ರದೇಶಗಳಲ್ಲಿ ಒಟ್ಟು 15 ಕೋಟಿ ಜನರು ವಾಸವಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.