ಮಹೇಂದ್ರ ಸಿಂಗ್ ಧೋನಿ, ವಿಶ್ವಕ್ರಿಕೆಟ್ ಕಂಡ ಅದ್ಭುತ ಆಟಗಾರ, ಅಪ್ರತಿಮ ನಾಯಕ! ಭಾರತಕ್ಕೆ ಎರಡೆರಡು ವರ್ಲ್ಡ್ ಕಪ್ (2007 ಟಿ20, 2011 ಒಡಿಐ) ಗೆದ್ದುಕೊಟ್ಟ ಸಾರಥಿ..! ಆದರೆ ಅದೆಂಥಾ ದಿಗ್ಗಜನಾದರೂ ಒಂದಲ್ಲ ಒಂದು ದಿನ ನಿವೃತ್ತಿ ಹೊಂದಲೇಬೇಕು. ಅದರಿಂದ ಮಾಹಿ ಕೂಡ ಹೊರತಲ್ಲ! 15 ವರ್ಷದ ಹಿಂದೆ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿ ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟ ಧೋನಿ ಮೂರು ವರ್ಷದ ಬಳಿಕ ಬದಲಾದ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ಚುಕ್ಕಾಣಿ ಹಿಡಿದರು. ಯುವ ಆಟಗಾರರಿಗೆ ಮಣೆ ಹಾಕಿದ್ದ ಕ್ಯಾಪ್ಟನ್ ಧೋನಿ ಕ್ರಿಕೆಟ್ ದಿಗ್ಗಜರನ್ನು ಕಡೆಗಾಣಿಸುತ್ತಿದ್ದಾರೆ ಅನ್ನೋ ಟೀಕೆಗಳೂ ಎದುರಾಗಿದ್ದವು. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಧೋನಿ ಪ್ರಬಲ ಯುವತಂಡವನ್ನು ಕಟ್ಟಿದ್ರು. ತಮ್ಮ ನಾಯಕತ್ವದಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಠಿಸಿದ್ರು. ಭಾರತದಲ್ಲಿ ನಡೆದ ಒಡಿಐ ವರ್ಲ್ಡ್ಕಪ್ನಲ್ಲೂ ಧೋನಿ ನೇತೃತ್ವದ ಭಾರತ ಚಾಂಪಿಯನ್ ಆಯಿತು!
ಧೋನಿ ಒಬ್ಬ ಸಮರ್ಥನಾಯಕನಾಗಿ ಮಾತ್ರವಲ್ಲ ತಂಡದ ಆಟಗಾರನಾಗಿ ಅದೆಷ್ಟೋ ಮ್ಯಾಚ್ಗಳಲ್ಲಿ ಏಕಾಂಗಿ ಹೋರಾಟ ನಡೆಸಿ ಭಾರತಕ್ಕೆ ಗೆಲುವು ತಂದಿದ್ದರು. ಇನ್ನೇನು ಮ್ಯಾಚ್ ನಮ್ಮ ಕೈ ತಪ್ಪಿತು, ಎದುರಾಳಿ ತಂಡ ಗೆದ್ದೇ ಬಿಟ್ಟಿತು ಅನ್ನುವಷ್ಟರಲ್ಲಿ ಧೋನಿ ಆ ಗೆಲುವನ್ನು ನಮ್ಮತ್ತ ಕಸಿದು ಕೊಂಡಿದ್ದೂ ಇದೆ.
ಇರಲಿ, ಧೋನಿ ಯಶೋಗಾಥೆ ಎಷ್ಟು ಹೇಳುತ್ತಾ ಹೋದರೂ ಮುಗಿಯದು ಪದಗಳ ಸಾಲು. ಇದೀಗ ಎಲ್ಲರೂ ಮಾತನಾಡುತ್ತಿರುವುದು ಧೋನಿ ಸಾಧನೆ ಬಗ್ಗೆ ಅಲ್ಲ! ಬದಲಾಗಿ ಧೋನಿ ಕ್ರಿಕೆಟ್ ಯುಗಾಂತ್ಯದ ಬಗ್ಗೆ!
ಹೌದು, ಈ ವರ್ಷ ಇಂಗ್ಲೆಂಡಿನಲ್ಲಿ ನಡೆದ ವರ್ಲ್ಡ್ಕಪ್ ಬಳಿಕ ಧೋನಿ ಕಣಕ್ಕಿಳಿದಿಲ್ಲ. ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡದ ಧೋನಿ ಬಾಂಗ್ಲಾ ವಿರುದ್ಧದ ಸರಣಿಗೂ ಆಯ್ಕೆಯಾಗಿಲ್ಲ! ಟೆಸ್ಟ್ ಕ್ರಿಕೆಟಿಗೆ ಈಗಾಗಲೇ ಗುಡ್ ಬೈ ಹೇಳಿರುವ ಧೋನಿ ಹೆಸರನ್ನು ಎಂಎಸ್ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಟಿ2ಗೂ ಪ್ರಕಟಿಸಿಲ್ಲ. ” ನಾವು ಮುಂದುವರೆಯುತ್ತಿದ್ದೇವೆ. ರಿಷಭ್ ಪಂತ್ಗೆ ಹೆಚ್ಚಿನ ಅವಕಾಶ ನೀಡುತ್ತಿದ್ದೇವೆ. ಇದುವರೆಗೂ ಅವರು ಹೇಳಿಕೊಳ್ಳುವಂಥಹ ಪ್ರದರ್ಶನ ನೀಡದೇ ಇರಬಹುದು. ಆದರೂ ನಾವು ಪಂತ್ ಮೇಲೆ ಹೆಚ್ಚಿನ ಫೋಕಸ್ ಮಾಡುತ್ತಿದ್ದೇವೆ ಅನ್ನೋದು ವೆರಿ ಕ್ಲಿಯರ್” ಅಂತ ಹೇಳಿರುವ ಎಂಎಸ್ಕೆ ಯುವಪ್ರತಿಭೆಗಳತ್ತ ಗಮನ ಕೊಡ್ತಿದ್ದೀವಿ. ಈ ಕುರಿತು ಧೋನಿ ಬಳಿ ಕೂಡ ಚರ್ಚೆ ನಡೆಸಿದ್ದೇವೆ. ಅವರು ಕೂಡ ನಮ್ಮ ನಿರ್ಧಾರವನ್ನು ಒಪ್ಪಿದ್ದಾರೆ ಎಂದು ಧೋನಿ ನಿವೃತ್ತಿ ವಿಚಾರದ ಬಗ್ಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿದ್ದಾರೆ.
ಇನ್ನು ಬಿಸಿಸಿಐ ನೂತನ ಅಧ್ಯಕ್ಷ ಸೌರವ್ ಗಂಗೂಲಿ, ”ಧೋನಿ ಮನಸ್ಸಲ್ಲಿ ಏನಿದೆ ಅಂತ ಗೊತ್ತಿಲ್ಲ. ಅವರು ತಮ್ಮ ಕ್ರಿಕೆಟ್ ಜೀವನದ ಬಗ್ಗೆ ಏನು ನಿರ್ಧಾರ ಮಾಡಿದ್ದಾರೆ ಅನ್ನೋದು ತಿಳಿದಿಲ್ಲ. ಶೀಘ್ರದಲ್ಲೇ ಧೋನಿ ಜೊತೆ ಮಾತಾಡ್ತೀನಿ. ಚಾಂಪಿಯನ್ಸ್ ಯಾವತ್ತು ಬೇಗ ಸೋಲನ್ನು ಒಪ್ಪಿಕೊಳ್ಳಲ್ಲ. ನಾನು ಬಿಸಿಸಿಐ ಅಧ್ಯಕ್ಷನಾಗಿರುವವರೆಗೂ ಎಲ್ರಿಗೂ ಸಮಾನ ಗೌರವ ಸಿಗುತ್ತೆ” ಅಂದಿದ್ದಾರೆ.
ಧೋನಿ ಜೊತೆ ಮಾತಾಡ್ತೀನಿ, ಚಾಂಪಿಯನ್ಸ್ ಸೋಲನ್ನು ಒಪ್ಪಿಕೊಳ್ಳಲ್ಲ ಎಂಬ ಗಂಗೂಲಿ ಮಾತುಗಳು ಸೂಕ್ಷ್ಮವಾಗಿ ಧೋನಿ ನಿವೃತ್ತಿ ದಿನ ಸಮೀಪಿಸುತ್ತಿದೆ ಅನ್ನೋದನ್ನು ಸೂಚಿಸುತ್ತಿವೆ.
ಧೋನಿ ಯಾವಾಗ ನಿವೃತ್ತಿ ಘೋಷಿಸ್ತಾರೋ, ಬಿಡ್ತಾರೋ?! ಬಟ್, ಧೋನಿ ಆಟವನ್ನು ಭಾರತ ಕ್ರಿಕೆಟ್ ತಂಡ ಮತ್ತು ಅಭಿಮಾನಿಗಳು ಮಿಸ್ ಮಾಡಿಕೊಳ್ತಿರೋದಂತು ಸತ್ಯ.