Wednesday, January 15, 2025

ಗಂಗೂಲಿ ‘ದಾದಾ’ಗಿರಿಯ ಆ ದಿನಗಳು ಮತ್ತು ಈಗಿನ ಸವಾಲುಗಳು

ಸೌರವ್ ಗಂಗೂಲಿ… ಭಾರತ ಕ್ರಿಕೆಟ್ ಮಾತ್ರವಲ್ಲ ಇಡೀ ವಿಶ್ವ ಕ್ರಿಕೆಟ್ ಕಂಡ ಅದ್ಭುತ ನಾಯಕ. ಇಂದು ಈ ಮಹಾನ್ ಕ್ರಿಕೆಟ್ ದಿಗ್ಗಜ ಬಿಸಿಸಿಐನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸೌರವ್ ಗಂಗೂಲಿ ಬಿಗ್​ಬಾಸ್ ಸ್ಥಾನಕ್ಕೆ ಸೂಕ್ತರು. ಗಂಗೂಲಿ ಅಧಿಕಾರಾವಧಿಯಲ್ಲಿ ಖಂಡಿತಾ ಭಾರತೀಯ ಕ್ರಿಕೆಟ್ ಇನ್ನೂ ಎತ್ತರಕ್ಕೆ ಬೆಳೆಯುತ್ತೆ ಅನ್ನೋ ನಿರೀಕ್ಷೆಯಂತೂ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯಲ್ಲೂ ಬೆಟ್ಟದಷ್ಟಿದೆ.
1999-2000ರ ಅವಧಿಯಲ್ಲಿ ಬಂಗಾಳದ ಯುವರಾಜ ಸೌರವ್ ಗಂಗೂಲಿ ಟೀಮ್ ಇಂಡಿಯಾದ ಸಾರಥ್ಯವಹಿಸಿಕೊಂಡಾಗ ಸಾಕಷ್ಟು ಸವಾಲುಗಳು ಅವರ ಮುಂದಿದ್ದವು. ಅವುಗಳೆಲ್ಲವನ್ನೂ ಎದುರಿಸಿದ ಬಂಗಾಳದ ಹುಲಿ ಗಂಗೂಲಿ ಭಾರತೀಯ ಕ್ರಿಕೆಟಿಗ ಹೊಸ ರೂಪ ಕೊಟ್ಟರು. ಅಂದು ಗಂಗೂಲಿ ಮುಂದೆ ಅದೆಂಥಾ ಸವಾಲುಗಳಿದ್ದವೋ ಅಂಥಾ ಬಹು ದೊಡ್ಡ ಸವಾಲುಗಳನ್ನು ಇಂದು ಬಿಗ್​ಬಾಸ್ ಗಂಗೂಲಿ ಎದುರಿಸಬೇಕಿದೆ.
‘ದಾದಾ’ಗಿರಿಯ ಆ ದಿನಗಳು ಮತ್ತು ‘ದಾದಾ’ಗಿರಿಯ ಈ ದಿನಗಳ ಕುರಿತು, ಅಂದು ಕ್ಯಾಪ್ಟನ್ ಗಂಗೂಲಿ ಎದುರಿಸಿದ್ದ ಚಾಲೆಂಜ್​ಗಳು, ಇಂದು ಬಿಸಿಸಿಐ ಪ್ರೆಸಿಡೆಂಟ್ ಗಂಗೂಲಿ ಮುಂದಿರೋ ಚಾಲೆಂಜ್​ಗಳ ಕುರಿತು ಇಲ್ಲಿದೆ ಒಂದು ನೋಟ.


‘ದಾದಾ’ಗಿರಿಯ ಆ ದಿನಗಳು : ಸೌರವ್ ಗಂಗೂಲಿ ಮೊಟ್ಟ ಮೊದಲು ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದು, 1999 ಸೆಪ್ಟೆಂಬರ್​ನಲ್ಲಿ. ಕೋಕಾ ಕೋಲಾ ಚಾಲೆಂಜ್ ಟೂರ್ನಿಮೆಂಟಿನಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಅಂದಿನ ಖಾಯಂ ನಾಯಕ ಸಚಿನ್ ತೆಂಡೂಲ್ಕರ್ ಬೆನ್ನು ನೋವಿನ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದಿದ್ದರಿಂದ ಗಂಗೂಲಿ ತಂಡವನ್ನು ಮುನ್ನಡೆಸಿದ್ದರು. ಆ ಮ್ಯಾಚನ್ನು ವೆಸ್ಟ್ ಇಂಡೀಸ್ 42ರನ್​ಗಳಿಂದ ಗೆದ್ದಿತ್ತು.
ಬಳಿಕ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದಲೂ ಸಚಿನ್ ದೂರ ಉಳಿದಿದ್ದರಿಂದ ಗಂಗೂಲಿಗೆ ಆ ಸರಣಿ ಮುನ್ನಡೆಸುವ ಜವಬ್ದಾರಿ ಸಿಕ್ಕಿತ್ತು. ಭಾರತ 2-1ರ ಅಂತರದಲ್ಲಿ ಸರಣಿ ಗೆದ್ದು ಬೀಗಿತ್ತು. 2000ನೇ ಇಸವಿ ಫೆಬ್ರವರಿ 21ರಂದು ಸಚಿನ್ ತೆಂಡೂಲ್ಕರ್ ನಾಯಕತ್ವ ತ್ಯಜಿಸಿದರು. 5 ದಿನದ ಬಳಿಕ ಅಂದ್ರೆ ಫೆಬ್ರವರಿ 26ರಂದು ಬಿಸಿಸಿಐ ಸೌರವ್ ಗಂಗೂಲಿಯನ್ನು ಟೀಮ್ ಇಂಡಿಯಾದ ಖಾಯಂ ನಾಯಕನನ್ನಾಗಿ ಮಾಡಿತು. ಮಾರ್ಚ್​ನಲ್ಲಿ ನಡೆದ ಸೌತ್​ ಆಫ್ರಿಕಾ ವಿರುದ್ಧದ ಸರಣಿ ಮೂಲಕ ಗಂಗೂಲಿ ಟೀಮ್ ಇಂಡಿಯಾದ ಖಾಯಂ ನಾಯಕರಾದರು.


ಗಂಗೂಲಿ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ಆ ದಿನಗಳಲ್ಲಿ ಭಾರತ ಕ್ರಿಕೆಟ್ ಅನೇಕ ಚಾಲೆಂಜ್​ಗಳನ್ನು ಎದುರಿಸುತ್ತಿತ್ತು. ಹಲವಾರು ಸಮಸ್ಯೆಗಳು, ಕಿರಿಕಿರಿಗಳ ಗೂಡಾಗಿತ್ತು. ಟೀಮ್ ಇಂಡಿಯಾ ಫಿಕ್ಸಿಂಗ್ ಆರೋಪದಲ್ಲಿ ನಲುಗಿತ್ತು. ಈ ವಿವಾದದಿಂದ ನಾಯಕ ಮೊಹಮ್ಮದ್ ಅಜರುದ್ಧೀನ್ ಆಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದರು. ಈ ಪ್ರಕರಣದ ನಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತಂಡದ ಮೇಲೆ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದರು. ಸಚಿನ್ ಕೂಡ ಹೆಚ್ಚು ಕಾಲ ನಾಯಕರಾಗಿ ಉಳಿದುಕೊಳ್ಳಲಿಲ್ಲ. ಅಂಥಾ ಕಾಲಘಟ್ಟದಲ್ಲಿ ಟೀಮ್ ಇಂಡಿಯಾ ನೊಗ ಹೊತ್ತ ಗಂಗೂಲಿ ತಂಡವನ್ನು ಮುನ್ನಡೆಸಿದ ಪರಿ ಇದೆಯಲ್ಲಾ ಅದು ನಿಜಕ್ಕೂ ಅದ್ಭುತ.

ಭಾರತ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದರು. ಮಾತಿಗೆ ಮಾತು, ಏಟಿಗೆ ತಿರುಗೇಟು ಗಂಗೂಲಿ ತತ್ವವಾಗಿತ್ತು. ಅಗ್ರೆಸ್ಸೀವ್​ ನಾಯಕನಾಗಿ ಗಂಗೂಲಿ ವಿದೇಶಿ ಟೀಮಿನ ಆಕ್ರಮಣಕಾರಿ ಆಟಕ್ಕೆ ಆಕ್ರಮಣದ ಮಾರ್ಗದಲ್ಲೇ ಉತ್ತರ ಕೊಡಲು ಶುರುಮಾಡಿದ್ದು ಇದೇ ಗಂಗೂಲಿ. ಎದುರಾಳಿ ಆಟಗಾರರ ಸ್ಲೆಡ್ಜಿಂಗ್ ತಂತ್ರ ಗಂಗೂಲಿ ಮುಂದೆ ಯಾವತ್ತೂ ವರ್ಕೌಟ್ ಆಗಲೇ ಇಲ್ಲ. ಸ್ಲೆಡ್ಜಿಂಗ್​ಗೆ ಯಾವ ರೀತಿ ತಿರುಗೇಟು ಕೊಡ್ಬೇಕು ಅನ್ನೋದನ್ನು ಕಲಿಸಿಕೊಟ್ಟಿದ್ದು ಕೂಡ ಇದೇ ಗಂಗೂಲಿ. ಆ ಮೂಲಕ ಎದುರಾಳಿಗಳ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದ್ದ ಗಂಗೂಲಿ ವಿದೇಶಿ ಪಿಚ್​ಗಳಲ್ಲಿ ಗೆಲ್ಲುವುದು ಹೇಗೆ ಅಂತ ತೋರಿಸಿಕೊಟ್ಟರು.


ಗಂಗೂಲಿ ನಾಯಕತ್ವದಲ್ಲಿ ವಿರೇಂದ್ರ ಸೆಹ್ವಾಗ್. ಯುವರಾಜ್ ಸಿಂಗ್, ಜಹೀರ್ ಖಾನ್ , ಹರ್ಭಜನ್ ಸಿಂಗ್ ಸೇರಿದಂತೆ ಅನೇಕ ಕ್ರಿಕೆಟಿಗರು ಬೆಳೆದಿದ್ದು ಗಂಗೂಲಿ ಗರಡಿಯಲ್ಲೇ. ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡ ಪಳಗಿದ್ದು, ಬೆಳೆದಿದ್ದು ಗಂಗೂಲಿ ನಾಯಕತ್ವದಲ್ಲೇ ಅನ್ನೋದನ್ನು ಕೂಡ ಯಾರೂ ಮರೆಯಲಾಗಲ್ಲ.
ನಾಯಕಲ್ಲಿರ ಬೇಕಾದ ಪ್ರಮುಖ ಗುಣ ಅಂದ್ರೆ ಎಂಥಾ ಸಂದರ್ಭದಲ್ಲೂ ತನ್ನೊಡನೆ ಇದ್ದವರ ಬೆಂಬಲಕ್ಕೆ ನಿಲ್ಲುವುದು. ಈ ಗುಣ ಬಂಗಾಳದ ಹುಲಿ ಗಂಗೂಲಿಯಲ್ಲಿ ರಕ್ತಗತವಾಗಿತ್ತು. ಕಳೆಪೆ ಫಾರ್ಮನಲ್ಲಿಯೂ ತನ್ನ ಸಹ ಆಟಗಾರರ ಬೆನ್ನಿಗೆ ನಿಂತು ಗಂಗೂ ಧೈರ್ಯ ತುಂಬಿ, ಕಮ್​ಬ್ಯಾಕ್ ಮಾಡುವಂತೆ ಮಾಡುತ್ತಿದ್ದರು.
ಹೀಗೆ ಗಂಗೂಲಿ ಟೀಮ್ ಇಂಡಿಯಾವನ್ನು ಗಟ್ಟಿ ಮಾಡಿದ್ರು. ಗಂಗೂಲಿ ಕಟ್ಟಿದ ಟೀಮ್ ಇಂಡಿಯಾ ಇವತ್ತು ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡವಾಗಿದೆ. ಇಡೀ ವಿಶ್ವ ಕ್ರಿಕೆಟ್ ಟೀಮ್ ಇಂಡಿಯಾಕ್ಕೆ ತಲೆಬಾಗುತ್ತಿದೆ ಎಂದರೆ ಅದಕ್ಕೆ ಕಾರಣ ಗಂಗೂಲಿ ಅನ್ನೋದನ್ನು ಯಾರೂ ಕೂಡ ಅಲ್ಲಗಳೆಯಲಾಗಲ್ಲ.

ಹೀಗೆ ತಂಡವನ್ನು ಕಟ್ಟಿ ಬೆಳೆಸಿದ್ದ ಗಂಗೂಲಿ ಇಂದು ಬಿಸಿಸಿಐನ ಅಧ್ಯಕ್ಷರಾಗಿದ್ದಾರೆ. ಈಗ ಗಂಗೂಲಿ ಮುಂದೆ ಅನೇಕ ಸವಾಲುಗಳಿವೆ.

ಬಿಗ್​ ಬಾಸ್ ಗಂಗೂಲಿ ಮುಂದಿರುವ ಸವಾಲುಗಳು :


* ಕಳೆದ ಮೂರು ವರ್ಷ ಸುಪ್ರೀಂಕೋರ್ಟ್​​ ನೇಮಿತ ಸಿಓಎ ಬಿಸಿಸಿಯನ್ನು ಮುನ್ನೆಡಿಸಿತು. ಈ ಅವಧಿಯಲ್ಲಿ ಆತಂರಿಕವಾಗಿ ಸಾಕಷ್ಟು ಅಸಮಧಾನ ಭುಗಿಲೆದ್ದಿತ್ತು. ಸಿಓಎ ನಡೆಯಿಂದ ಮಾಜಿ ಮತ್ತು ಹಾಲಿ ಬಿಸಿಸಿಐ ಅಧಿಕಾರಿಗಳು ಬೇಸತ್ತಿದ್ದರು. ಈಗ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಗಂಗೂಲಿಗೆ ಬಿಸಿಸಿಐಯ ಇಡೀ ವ್ಯವಸ್ಥೆಗೆ ಮರುಜೀವ ನೀಡುವ ಬಹು ದೊಡ್ಡ ಸವಾಲಿದೆ.

* ಮಾಜಿ ಮತ್ತು ಹಾಲಿ ಕ್ರಿಕೆಟಿಗರು ನೂತನ ಅಧ್ಯಕ್ಷ ಗಂಗೂಲಿ ಮೇಲೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಕ್ರಿಕೆಟಿಗರ ನೋವು ಅರ್ಥಮಾಡಿಕೊಳ್ಳಬಲ್ಲ ಗಂಗೂಲಿ ಅವರೆಲ್ಲರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ.

* ಬಿಸಿಐ ಮತ್ತು ಐಸಿಸಿ ನಡುವಿನ ವಿವಾದವನ್ನು ಶಮನ ಮಾಡುವ ಮಹತ್ತರ ಸವಾಲು ಕೂಡ ಗಂಗೂಲಿ ಎದುರಿಗಿದೆ.

* 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಇಂಗ್ಲೆಂಡಿನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟೂರ್ನಿ ಗೆದ್ದಿದ್ದು ಬಿಟ್ಟರೆ, ಬಳಿಕ ಇಲ್ಲಿಯವರೆಗೆ ಒಂದೇ ಒಂದು ಐಸಿಸಿ ಪ್ರಮುಖ ಟೂರ್ನಿಯನ್ನು ಗೆದ್ದಿಲ್ಲ. ಈ ಬಗ್ಗೆ ಈಗಾಗಲೇ ಗಂಗೂಲಿ ಟೀಮ್ ಇಂಡಿಯಾ ಕ್ಯಾಪ್ಟನ್ ಕೊಹ್ಲಿಗೆ ಸೂಚನೆ ನೀಡಿದ್ದಾರೆ. ಭಾರತ ಹೆಚ್ಚು ಹೆಚ್ಚು ಸರಣಿ ಗೆಲ್ಲುವ ಕಡೆಗೆ ಗಮನಹರಿಸಬೇಕು ಎಂದು ಹೇಳಿದ್ದಾರೆ. ಬಿಸಿಸಿಐ ಅಧ್ಯಕ್ಷರಾಗಿರುವ ಗಂಗೂಲಿ ತಂಡವನ್ನು ಯಾವ ರೀತಿ ಬಲ ಪಡಿಸುತ್ತಾರೆ ಎಂಬುದು ಕೂಡ ಸವಾಲಿನ ವಿಷಯವೇ.

* ದೇಶಿಯ ಟೂರ್ನಿ ಮೇಲೆ ಹೆಚ್ಚು ಒಲವು ಇರುವ ಗಂಗೂಲಿ ರಣಜಿ ಕಡೆಗೆ ಹೆಚ್ಚಿನ ಗಮನ ಹರಿಸಿದ್ದು, ಟೂರ್ನಿಗೆ ಹೊಸ ರೂಪ ನೀಡುವ ಭರವಸೆ ಇದೆ. ನಿಜವಾದ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಗಂಗೂಲಿ ನಿಸ್ಸೀಮ. ಪ್ರತಿಭೆಗೆ ಮಣೆ ಹಾಕುವ ಗಂಗೂಲಿ ಮುಂದೆ ಬೇರಾವ ಆಟವೂ, ಯಾವ ರಾಜಕೀಯವೂ ನಡೆಯಲ್ಲ. ಹೀಗಾಗಿ ಗಂಗೂಲಿ ಯಾವ ರೀತಿ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತಾರೆ ಎಂಬುದು ನಮಗೆ ಕುತೂಹಲ, ಯುವ ಕ್ರಿಕೆಟಿಗರಿಗೆ ತಮ್ಮ ಆಯ್ಕೆಯ ಕಾತುರ, ಗಂಗೂಲಿಗದ ದೊಡ್ಡ ಸವಾಲು!

RELATED ARTICLES

Related Articles

TRENDING ARTICLES