ಆತ ಡಾಕ್ಟರೇ ಅಲ್ಲ…ಆದರೆ ನಕಲಿ ಪ್ರಮಾಣ ಪತ್ರ ಇಟ್ಕೊಂಡು ಒಂದಲ್ಲ ಎರಡಲ್ಲ ಬರೋಬ್ಬರಿ 10 ವರ್ಷಗಳ ಕಾಲ ಡಾಕ್ಟರ್ ಎಂದು ಮೆರೆದಿದ್ದಾನೆ..! ಆಸ್ಪತ್ರೆಗೆ ಬರೋ ರೋಗಿಗಳಿಗೆ ಒಂದೆರಡು ಮಾತ್ರೆ ಕೊಟ್ಟು ಜೇಬಿಗೆ ದುಡ್ಡು ಇಳಿಸಿಕೊಳ್ಳುತ್ತಿದ್ದ ಆಸಾಮಿಯೂ ಈತನಲ್ಲ.. ಬದಲಾಗಿ ಸಾವಿರ ಸಾವಿರ ಆಪರೇಷನ್ ಮಾಡಿದ್ದಾನೆ ಈ ಭೂಪ..!
ಇದು ಈ ಹಿಂದೆ ಬಂದಿರೋ ಕೆಲ ಸಿನಿಮಾಗಳ ಮುಂದುವರೆದ ಭಾಗವೂ ಅಲ್ಲ.. ಮುಂದೆ ಬರಲಿರುವ ಸಿನಿಮಾ ಕಥೆಯ ಸಾರಾಂಶ ಕೂಡ ಅಲ್ಲ… ಇದು ರಿಯಲ್ ಸ್ಟೋರಿ. ಈ ಘಟನೆ ನಡೆದಿರೋದು ಉತ್ತರ ಪ್ರದೇಶದಲ್ಲಿ.. ಡಾಕ್ಟರ್ ಮುಖವಾಡ ಧರಿಸಿ ಸಿಕ್ಕಿಬಿದ್ದವ ಒಂದು ಟೈಮ್ನಲ್ಲಿ ನಮ್ಮ ಮಂಗಳೂರಿನ ವಾಯುದಳದಲ್ಲಿ ಪ್ಯಾರಾಮೆಡಿಕ್ (ಅರೆವೈದ್ಯಕೀಯ) ಸಿಬ್ಬಂದಿಯಾಗಿ ಕೆಲಸ ಮಾಡಿದ್ದ.
ಹೌದು, ಆತನ ಹೆಸರು ಓಂ ಪಾಲ್ ಅಂತ. ವಯಸ್ಸು 50. ನಕಲಿ ವೈದ್ಯಕೀಯ ಪ್ರಮಾಣ ಪತ್ರ ಇಟ್ಕೊಂಡು ಉತ್ತರ ಪ್ರದೇಶದ ಮೀರತ್ನ ದಿಯೋಬಂದ್ನಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡಿ, 1 ಸಾವಿರ ಆಪರೇಷನ್ ಕೂಡ ಮಾಡಿದ್ದಾನೆ. ಈಗ ಈತನ ಬಂಡವಾಳ ಬಯಲಿಗೆ ಬಂದಿದ್ದು ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ ಪಡೆದಿದ್ದ ಡಾ. ರಾಜೇಶ್ ಆರ್ ಎಂಬುವವರ ಪ್ರಮಾಣ ಪತ್ರವನ್ನು ನಕಲಿ ಮಾಡಿ ಯುಪಿಯಲ್ಲಿ ಕಮ್ಯುನಿಟಿ ಹೆಲ್ತ್ಸೆಂಟರ್ (ಸಿಹೆಚ್ಸಿ)ನಲ್ಲಿ ಕಳೆದ 10 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದಾನೆ..! 2000ನೇ ಇಸವಿಗೆ ಮುನ್ನ ಮಂಗಳೂರಿನಲ್ಲಿ ಪ್ಯಾರಾಮೆಡಿಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದ. ಈಗ ಕೂಡ ವಾಯುದಳದಿಂದ ಪಿಂಚಣಿ ಪಡೆಯುತ್ತಿದ್ದಾನೆಂದು ತಿಳಿದುಬಂದಿದೆ.
ಮಂಗಳೂರಲ್ಲಿರುವಾಗ ಡಾ.ರಾಜೇಶ್ ಅವರ ಜೊತೆ ಕೆಲಸ ಮಾಡ್ತಿದ್ದ ಈ ಭೂಪ ರಾಜೇಶ್ ವಿದೇಶಕ್ಕೆ ಹೋದ್ಮೇಲೆ ಅವರ ಎಂಬಿಬಿಎಸ್ ಪದವಿ ಪ್ರಮಾಣ ಪತ್ರಕ್ಕೆ ತನ್ನ ಫೋಟೋ ಅಂಟಿಸಿ ಸರ್ಟಿಫಿಕೇಟನ್ನೇ ನಕಲು ಮಾಡಿಕೊಂಡಿದ್ದನೆಂಬುದು 10 ವರ್ಷಗಳ ಬಳಿಕ ಇದೀಗ ಬಯಲಾಗಿದೆ.
ರಕ್ಷಣೆ ಕೋರಿ ಠಾಣೆ ಮೆಟ್ಟಿಲೇರಿ ಅತಿಥಿಯಾದ : ಈತ ಪೊಲೀಸರ ಅತಿಥಿಯಾಗಿದ್ದು ರಕ್ಷಣೆ ಕೋರಲು ಹೋಗಿ..! ಈತ ನಕಲಿ ಡಾಕ್ಟರ್ ಎಂದು ತಿಳಿದ ಓರ್ವ ಕರೆ ಮಾಡಿ ಬೆದರಿಕೆ ಹಾಕಿದ್ದಲ್ಲದೆ 40ಲಕ್ಷ ರೂಗಳಿಗೆ ಬೇಡಿಕೆ ಇಟ್ಟಿದ್ದ. ತನಗೆ ಬೆದರಿಕೆ ಕರೆ ಬರ್ತಿದೆ ಅಂತ ಪೊಲೀಸ್ ಕಂಪ್ಲೆಂಟ್ ಕೊಡೋಕೆ ಓಂಪಾಲ್ ಹೋಗಿ, ದಾಖಲೆ ನೀಡಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ.