Wednesday, January 15, 2025

ವಿಹಾರಿ ಚೊಚ್ಚಲ ಸೆಂಚುರಿ, ಬ್ಯಾಟ್ಸ್​​ಮನ್​ಗಳೇ ನಾಚುವಂತೆ ಬ್ಯಾಟ್​ ಬೀಸಿದ ಇಶಾಂತ್…!

ಕಿಂಗ್​​ಸ್ಟನ್ : ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​​ನಲ್ಲಿ ಟೀಮ್ ಇಂಡಿಯಾ ಸದ್ಯ 329ರನ್​ಗಳ ಮುನ್ನಡೆ ಕಾಯ್ದಿರಿಸಿಕೊಂಡಿದೆ.
ಸಬಿನಾ ಪಾರ್ಕ್​​ನಲ್ಲಿ ನಡೆಯುತ್ತಿರುವ ಟೆಸ್ಟ್​ನಲ್ಲಿ 5 ವಿಕೆಟ್​ಗೆ 264ರನ್​ಗಳಿಂದ 2ನೇ ದಿನದ ಆಟ ಮುಂದುವರೆಸಿದ ವಿರಾಟ್​ ಪಡೆಗೆ ಆಲ್​ರೌಂಡರ್ ಹನುಮ ವಿಹಾರಿ (117) ಮತ್ತು ವೇಗಿ ಇಶಾಂತ್ ಶರ್ಮಾ (57) ಆಸೆಯಾದ್ರು. 2ನೇ ದಿನಕ್ಕೆ ವಿಹಾರಿ ಜೊತೆ ಬ್ಯಾಟಿಂಗ್ ಆರಂಭಿಸಿದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ರಿಷಬ್ ಪಂತ್ ಮೊದಲ ದಿನ ತಾವುಗಳಿಸಿದ್ದ ರನ್​ಗಷ್ಟೇ ತೃಪ್ತಿ ಪಟ್ಟರು. 2ನೇ ದಿನದಾಟದಲ್ಲಿ ಒಂದೇ ಒಂದು ರನ್ ಪೇರಿಸಿದೆ (27) ಪೆವಿಲಿಯನ್ ಸೇರಿದ್ರು. ನಂತರ ವಿಹಾರಿ ಜೊತೆಯಾದ ಅನುಭವಿ ಆಲ್​ರೌಂಡರ್ ರವೀಂದ್ರ ಜಡೇಜಾ ಆಟ 16ರನ್​ ಗಳಿಗೆ ಸೀಮಿತವಾಯ್ತು. ಬಳಿಕ ವಿಹಾರಿ ಜೊತೆ ಸೇರಿದ ಬೌಲರ್ ಇಶಾಂತ್ ಶರ್ಮಾ ಬ್ಯಾಟ್ಸ್​ಮನ್​ಗಳೇ ನಾಚುವಂತೆ ವಿಂಡೀಸ್ ದಾಳಿಯನ್ನು ಎದುರಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ವಿಹಾರಿಗೆ ಸಾಥ್ ನೀಡಿದ್ರು.
ವಿಹಾರಿ ಮತ್ತು ಇಶಾಂತ್ ಜೋಡಿ 28.3 ಓವರ್​ ಕ್ರೀಸ್​ನಲ್ಲಿ ಬೇರೂರಿತ್ತು. ಈ ಜೋಡಿಯನ್ನು ಬೇರ್ಪಡಿಸಲು ಕೆರಬಿಯನ್ನರು ಹರಸಾಹಸ ಪಟ್ಟರು. 8ನೇ ವಿಕೆಟ್​ಗೆ ಇವರಿಬ್ಬರು ಒಡಗೂಡಿ 112ರನ್ ಕಲೆಹಾಕಿದ್ರು. ತಂಡದ ಮೊತ್ತ 414ರನ್ ಆಗಿದ್ದಾರ ಶರ್ಮಾ (57) ಔಟಾದ್ರು. ಮತ್ತೆ ತಂಡಕ್ಕೆ ಎರಡು ರನ್ ಸೇರುವಷ್ಟರಲ್ಲಿ ಮೊಹಮ್ಮದ್ ಶಮಿ ಮತ್ತು ವಿಹಾರಿ (117) ಪೆವಿಲಿಯನ್ ಸೇರಿದ್ರು. ಇದರೊಂದಿಗೆ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ 416ರನ್​ಗಳಿ ಸರ್ವಪತನ ಕಂಡಿತು. ಹನುಮ ವಿಹಾರಿ ಟೆಸ್ಟ್​​​ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ರು.
ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಭಾರತದ ದಾಳಿಗೆ ತತ್ತರಿಸಿತು. ವೇಗಿ ಜಸ್​ಪ್ರೀತ್ ಬುಮ್ರಾ ವಿಂಡೀಸ್​ ಬ್ಯಾಟ್ಸ್​​ಮನ್ ಗಳನ್ನು ಸಿಂಹಸ್ವಪ್ನವಾಗಿ ಕಾಡಿದ್ರು. ದಿನದಾಟದ ಅಂತ್ಯಕ್ಕೆ ವಿಂಡೀಸ್ 33 ಓವರ್​ ಬ್ಯಾಟ್ ಮಾಡಿ 7 ವಿಕೆಟ್​ ನಷ್ಟಕ್ಕೆ 87ರನ್ ಗಳಿಸಿದೆ. ಭಾರತದ ಪರ ಹ್ಯಾಟ್ರಿಕ್ ಸೇರಿದಂತೆ 6 ವಿಕೆಟ್ ಕಿತ್ತ ಜಸ್​ಪ್ರೀತ್ ಬುಮ್ರಾ ವಿಂಡೀಸ್ ಬ್ಯಾಟಿಂಗ್​ಗೆ ಬ್ರೇಕ್ ಹಾಕಿದ್ರು. ಮೊಹಮ್ಮದ್​ ಶಮಿ 1 ವಿಕೆಟ್ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES