ಕಿಂಗ್ಸ್ಟನ್ (ಜುಮೈಕಾ) : ವಿಶ್ವಕಪ್ ಬಳಿಕ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ20, ಒಡಿಐ ಸರಣಿಯನ್ನು ಅಧಿಕೃತವಾಗಿ ಗೆದ್ದಿದ್ದು, ಇಂದಿನಿಂದ ಆರಂಭವಾಗುವ ಎರಡನೇ ಟೆಸ್ಟ್ ಮ್ಯಾಚ್ನಲ್ಲೂ ಅತಿಥೇಯ ವೆಸ್ಟ್ ಇಂಡೀಸ್ ಅನ್ನು ಬಗ್ಗು ಬಡಿಯುವ ತವಕದಲ್ಲಿದೆ. ಈಗಾಗಲೇ ಮೊದಲ ಟೆಸ್ಟ್ನಲ್ಲಿ ಸೋಲುಂಡಿರುವ ಕೆರಬಿಯನ್ನರು ವೈಟ್ವಾಷ್ ಭೀತಿಯಲ್ಲಿದ್ದಾರೆ.
ಕಿಂಗ್ ಸ್ಟನ್ನ ಸಬಿನಾ ಪಾರ್ಕ್ ಸ್ಟೇಡಿಯಂನಲ್ಲಿ ಇಂದಿನಿಂದ ಎರಡನೇ ಟೆಸ್ಟ್ ಆರಂಭವಾಗುತ್ತಿದೆ. ವಿರಾಟ್ ಕೊಹ್ಲಿ ಪಡೆಗೆ ಮುಖ್ಯವಾಗಿ ಆರಂಭಿಕ ಜೋಡಿಯದ್ದೇ ದೊಡ್ಡ ತಲೆನೋವಾಗಿದೆ. ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಫಸ್ಟ್ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆದರೆ ಅವರಿಬ್ಬರೂ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 5ರನ್ ಜೊತೆಯಾಟ ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 30ರನ್ ಜೊತೆಯಾಟ ಮಾತ್ರ ಈ ಜೋಡಿಯಿಂದ ಬಂದಿತ್ತು. ವೈಯಕ್ತಿಕವಾಗಿಯೂ ಹೆಚ್ಚು ರನ್ ಗಳಿಸಲು ಇಬ್ಬರೂ ಎಡವಿದ್ದರು.
ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿ ಪಡೆಗೆ ಆರಂಭಿಕ ಜೋಡಿಯ ತಲೆ ನೋವು ಈ ಸರಣಿಯಲ್ಲಿ ಮಾತ್ರವಲ್ಲ. 2018ರ ಡಿಸೆಂಬರ್ನಲ್ಲಿ ನಡೆದ ಟೆಸ್ಟ್ನಲ್ಲಿ ಹನುಮ ವಿಹಾರಿ ಮತ್ತು ಮಯಾಂಕ್ ಅಗರ್ವಾಲ್ ಅವರನ್ನು ಓಪನಿಂಗ್ ಕಳುಹಿಸಲಾಗಿತ್ತು. ಆ ಪ್ರಯೋಗ ಕ್ಲಿಕ್ ಆಗಿರಲಿಲ್ಲ. ಪರ್ತ್ ಟೆಸ್ಟ್ನಲ್ಲಿ ಕೆ.ಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇನ್ನಿಂಗ್ಸ್ ಆರಂಭಿಸಿದ್ರು. ಈ ಜೋಡಿ ಕೂಡ ನಿರೀಕ್ಷಿತ ಪ್ರದರ್ಶನ ನೀಡಿರ್ಲಿಲ್ಲ.
ಇನ್ನು ಇಂದಿನಿಂದ ಆರಂಭವಾಗುವ ಟೆಸ್ಟ್ ಬಗ್ಗೆ ಗಮನಿಸುವುದಾದರೆ ರಾಹುಲ್, ಅಗರ್ವಾಲ್ ಅಥವಾ ಪಂತ್ ಕೂರಿಸಿ ರೋಹಿತ್ ಶರ್ಮಾ ಅವರನ್ನು ಕಣಕ್ಕಿಳಿಸಬಹುದು. ಪಂತ್ ಅವರನ್ನು ಹೊರಗಿಟ್ಟು ವೃದ್ಧಿಮಾನ್ ಸಾಹಗೆ ಅವಕಾಶ ನೀಡುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಪಂತ್ ಬದಲು ರೋಹಿತ್ ಶರ್ಮಾ ಕಣಕ್ಕಿಳಿದರೆ ಕನ್ನಡಿಗ ಕೆ.ಎಲ್ ರಾಹುಲ್ಗೆ ವಿಕೆಟ್ ಕೀಪಿಂಗ್ ಹೊಣೆ ಹೆಚ್ಚುವರಿಯಾಗಿ ಹೆಗಲೇರಲಿದೆ.
ಟೀಮ್ ಇಂಡಿಯಾವೇ ಗೆಲ್ಲುವ ನೆಚ್ಚಿನ ತಂಡ ಎನಿಸಿದರೂ ಜೇಸನ್ ಹೋಲ್ಡರ್ ನೇತೃತ್ವದ ವಿಂಡೀಸ್ ಗಾಯಗೊಂಡಿರುವ ಹುಲಿಗಳಂತಿದ್ದು.. ಈ ಟೆಸ್ಟ್ನಲ್ಲಾದರೂ ಗೆಲ್ಲಬೇಕೆಂಬ ಹಠದಲ್ಲಿದೆ. ಭಾರತ ಕೆರಬಿಯನ್ನರನ್ನಂತೂ ಲಘುವಾಗಿ ಪರಿಗಣಿಸುವಂತಿಲ್ಲ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಗಂಟೆಗೆ ಪಂದ್ಯ ಆರಂಭವಾಗಲಿದೆ.
ತಂಡಗಳು ಇಂತಿವೆ
ಭಾರತ : ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಮಯಾಂಕ್ ಅಗರ್ ವಾಲ್, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರೋಹಿತ್ ಶರ್ಮಾ, ರಿಷಬ್ ಪಂತ್, ವೃದ್ಧಿಮಾನ್ ಸಾಹ, ರವಿಚಂದ್ರನ್ ಅಶ್ವಿನ್, ಜಡೇಜಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್.
ವೆಸ್ಟ್ ಇಂಡೀಸ್
ಜೇಸನ್ ಹೋಲ್ಡರ್ (ನಾಯಕ), ಕ್ರೇಗ್ ಬ್ರಾತ್ ವೇಟ್, ಡರೇನ್ ಬ್ರಾವೊ, ಶಮಾರ್ ಬ್ರೂಕ್ಸ್, ಜಾನ್ ಕ್ಯಾಂಬೆಲ್, ರಾಸ್ಟನ್ ಚೇಸ್, ರಖೀಮ್ ಕಾರ್ನ್ ವಾಲ್, ಜಹ್ಮರ್ ಹ್ಯಾಮಿಲ್ಟನ್, ಶ್ಯಾನನ್ ಗ್ಯಾಬ್ರಿಯಲ್, ಶಿಮ್ರಾನ್ ಹೆಟ್ಮಾಯರ್, ಶಾಯ್ ಹೋಪ್, ಕಿಮೊ ಪಾಲ್, ಕೆಮರ್ ರೋಚ್.