ಈ ಹಿಂದೆ ಕ್ರಿಕೆಟ್ ಪಿಚ್ನಲ್ಲಿ ಮೂತ್ರ ವಿಸರ್ಜನೆ ಮಾಡಿ ವಿವಾದಕ್ಕೆ ಗುರಿಯಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ಆಟಗಾರರು ಈ ಬಾರಿ ಪಿಚ್ನಲ್ಲಿ ಬಿಯರ್ ಕುಡಿದು ಎಡವಟ್ಟು ಮಾಡಿಕೊಂಡಿದ್ದಾರೆ..!
ಲೀಡ್ಸ್ನಲ್ಲಿ ನಡೆದ ಮ್ಯಾಚ್ನಲ್ಲಿ ಸ್ಟ್ರೋಕ್ ಅವರ ಪ್ರಳಯಾಂತಕ ಆಟದ ನೆರವಿನಿಂದ ಆಸೀಸ್ ವಿರುದ್ಧ 1ರನ್ಗಳ ರೋಚಕ ಗೆಲುವು ಪಡೆದ ಬಳಿಕ ಇಂಗ್ಲೆಂಡ್ ಆಟಗಾರರು ಪಿಚ್ನಲ್ಲಿ ಕುಳಿತು ಬಿಯರ್ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ..!
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಆ್ಯಶಸ್ ಟೆಸ್ಟ್ನ 3ನೇ ಪಂದ್ಯದಲ್ಲಿ, ಆಸ್ಟ್ರೇಲಿಯಾ ನೀಡಿದ್ದ 362 ರನ್ಗಳ ಟಾರ್ಗೆಟ್ನ್ನು ಬೆನ್ನತ್ತಿದ ಇಂಗ್ಲೆಂಡ್ ಟೀಮ್ ಆಸ್ಟ್ರೇಲಿಯಾ ಬೌಲರ್ಸ್ಗಳ ಮುಂದೆ ತತ್ತರಿಸಿ 286 ರನ್ಗೆ 9 ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿತ್ತು. ಪ್ರಥಮ ಇನ್ನಿಂಗ್ಸ್ನಲ್ಲೂ ಕೇವಲ 67 ರನ್ನಿಗೆ ಆಲ್ಔಟ್ ಆಗಿದ್ದ ಇಂಗ್ಲೆಂಡ್ ಈ ಪಂದ್ಯವನ್ನೂ ಕಳೆದುಕೊಳ್ಳೋ ಭೀತಿಯಲ್ಲಿತ್ತು. ಆದ್ರೆ ಒಂದೆಡೆ ವಿಕೆಟ್ಗಳು ಉರುಳುತ್ತಿದ್ದರೂ ಕ್ರೀಸ್ನಲ್ಲಿ ಭದ್ರವಾಗಿ ನೆಲೆಯೂರಿದ್ದ, ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಬೆನ್ ಸ್ಟೋಕ್ಸ್ ಇಲ್ಲೂ ಇಂಗ್ಲೆಂಡ್ ಪಾಲಿಗೆ ಸೂಪರ್ ಹೀರೋ ಆಗಿ ಮೆರೆದರು.
5 ಗಂಟೆಗಳ ಕಾಲ ಕ್ರೀಸ್ ಆಕ್ರಮಿಸಿಕೊಂಡಿದ್ದ ಅವರು ಜಾಕ್ ಲೀಚ್ ಜೊತೆ ಸೇರಿ ಕೊನೆಯ ವಿಕೆಟ್ಗೆ 76 ರನ್ಗಳ ಜೊತೆಯಾಟವಾಡಿ ಆಸ್ಟ್ರೇಲಿಯಾದ ಹಿಡಿತದಲ್ಲಿದ್ದ ಪಂದ್ಯವನ್ನು ಕಸಿದುಕೊಂಡರು. ಸ್ಟೋಕ್ಸ್ 219 ಎಸೆತಗಳಿಗೆ 11 ಬೌಂಡರಿ, 8 ಭರ್ಜರಿ ಸಿಕ್ಸರ್ ಸೇರಿದಂತೆ ಆಕರ್ಷಕ 135 ರನ್ ಸಿಡಿಸಿದ್ರು. ಕೊನೆಯಲ್ಲಿ ಬೌಂಡರಿಗಳ ಸುರಿಮಳೆಯನ್ನೇ ಸುರಿಸಿದ ಬೆನ್ ಸ್ಟೋಕ್ಸ್ರ, ವೀರಾವೇಶದ ಆಟದಿಂದಾಗಿ ಇಂಗ್ಲೆಂಡ್ 1 ವಿಕೆಟ್ನ ರೋಚಕ ಜಯ ದಾಖಲಿಸಿತು.
ಈ ಅನಿರೀಕ್ಷಿತ ಗೆಲುವನ್ನು ಇಂಗ್ಲೆಂಡ್ ಆಟಗಾರರು ಡಿಫ್ರೆಂಟಾಗಿ ಆಚರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಮ್ಯಾಚ್ ವಿನ್ ಆದ ತಕ್ಷಣ ಡ್ರೆಸ್ಸಿಂಗ್ ರೂಂ ನಿಂದ ಫೀಲ್ಡ್ನತ್ತ ಓಡಿ ಬಂದ ಇಂಗ್ಲೆಂಡ್ ಆಟಗಾರರು ಕ್ರಿಕೆಟ್ ಪಿಚ್ನಲ್ಲೇ ಕೂತು ಬಿಯರ್ ಕುಡಿಯುವ ಮೂಲಕ ಗೆಲುವನ್ನು ಸಂಭ್ರಮಿಸಿದ್ರು. ಆ ವೇಳೆ ಸ್ಟೇಡಿಯಂನಲ್ಲಿ ಯಾರೂ ಇಲ್ಲದಿದ್ರು ಕೂಡ ಇಂಗ್ಲೆಂಡ್ ಟೀಮ್ನ ಬಿಯರ್ ಪಾರ್ಟಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಈ ಹಿಂದೆ 2013ರಲ್ಲೂ ಇಂಗ್ಲೆಂಡ್ ಆ್ಯಶಸ್ ಟೆಸ್ಟ್ ವಿನ್ ಆದ ಖುಷಿಯನ್ನು ಸಂಭ್ರಮಿಸುವ ವೇಳೆ, ಇಂಗ್ಲೆಂಡ್ನ ಕೆವಿನ್ ಪೀಟರ್ಸನ್, ಸ್ಟುವರ್ಟ್ ಬ್ರಾಡ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಪಿಚ್ನಲ್ಲೇ ಮೂತ್ರ ಮಾಡಿ ವಿವಾದಕ್ಕೀಡಾಗಿದ್ರು. ನಂತರ ಆಟಗಾರರ ಈ ವರ್ತನೆಗಾಗಿ ಇಂಗ್ಲೆಂಡ್ ಕ್ರಿಕೆಟ್ ಕ್ಷಮೆ ಕೇಳಿತ್ತು.