ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಹಾಡಿಗೆ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಧ್ವನಿಯಾಗಿದ್ದಾರೆ. ಈ ಚಿತ್ರದಲ್ಲಿ ಆನಂದರಾಮ್ ಬರೆದಿರುವ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬ ಹಾಡನ್ನು ಪುನೀತ್ ರಾಜಕುಮಾರ್ ಅವರು ಹಾಡಿದ್ದಾರೆ.
ಗೀತಾ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಹೋರಾಟಗಾರರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 1980 ರಲ್ಲಿ ಕನ್ನಡ ಭಾಷೆಯ ಆದ್ಯತೆಗಾಗಿ ನಡೆದ ಗೋಕಾಕ್ ಚಳುವಳಿ ಈ ಚಿತ್ರದ ಕಥಾವಸ್ತುವಾಗಿದೆ. ವಿಜಯ್ ನಾಗೇಂದ್ರ ಗೀತಾ ಚಿತ್ರವನ್ನು ನಿರ್ದೇಶಿಸಿದ್ದು, ಅನೂಪ್ ರೂಬೆನ್ಸ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷವೆಂದರೇ,ಚಿತ್ರದಲ್ಲಿ ನಟ ದಿ.ಶಂಕರ್ನಾಗ್ ಅವರು ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೈಯದ್ ಸಲಾಂ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸೆಪ್ಟೆಂಬರ್ 27ಕ್ಕೆ ಚಿತ್ರ ಬಿಡುಗಡೆಗೊಳ್ಳಲಿದೆ.