Saturday, January 11, 2025

ಟಿ-20ಯಲ್ಲಿ ಐತಿಹಾಸಿಕ ದಾಖಲೆ ಬರೆದ ಕನ್ನಡಿಗ ಕೃಷ್ಣಪ್ಪ ಗೌತಮ್​

ಬೆಂಗಳೂರು: ಅತೀ ವೇಗದ ಶತಕ..ಅತೀ ಹೆಚ್ಚು ಸಿಕ್ಸರ್ಸ್​..ಅತೀ ಹೆಚ್ಚು ವೈಯಕ್ತಿಕ ಸ್ಕೋರ್​..ಅತೀ ಹೆಚ್ಚು ವಿಕೆಟ್​​.. ಇದು ಕರ್ನಾಟಕ ಪ್ರೀಮಿಯರ್​​ ಲೀಗ್​​ನ 15 ನೇ ಪಂದ್ಯದಲ್ಲಿ ದಾಖಲಾದ ರೆಕಾರ್ಡ್ಸ್​​​.. ವಿಶೇಷವೆಂದರೇ, ಈ ಎಲ್ಲಾ ದಾಖಲೆಗಳಿಗೆ ಕಾರಣಕರ್ತರಾಗಿದ್ದು ಒಬ್ಬನೇ ಆಟಗಾರ ಅದೂ ಕನ್ನಡಿಗ ಕೃಷ್ಣಪ್ಪ ಗೌತಮ್. ಈ ಮೂಲಕ ಬ್ಯಾಟಿಂಗ್​​ ಹಾಗೂ ಬೌಲಿಂಗ್​​​ನಲ್ಲಿ ಸ್ಫೋಟಕ ಆಟವಾಡಿದ ಕೃಷ್ಣಪ್ಪ ಗೌತಮ್ ​ ಟಿ-20ಯಲ್ಲಿ ಇತಿಹಾಸ ರಚಿಸಿದ್ರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಬಳ್ಳಾರಿ ಟಸ್ಕರ್ಸ್​​ ಹಾಗೂ ಶಿವಮೊಗ್ಗ ಲಯನ್ಸ್​​​ ನಡುವಿನ ಪಂದ್ಯ ಗೌತಮ್​​ ಪರಾಕ್ರಮಕ್ಕೆ ಸಾಕ್ಷಿಯಾಗಿದೆ. ಟಾಸ್​ ಗೆದ್ದ ಬಳ್ಳಾರಿ ಟಸ್ಕರ್ಸ್​​ ತಂಡ ಬ್ಯಾಟಿಂಗ್​​ ಆಯ್ದುಕೊಂಡಿತು. ಒನ್​​ಡೌನ್​​ ಬ್ಯಾಟ್ಸ್​ಮನ್​​ ಆಗಿ ಕಣಕ್ಕೆ ಇಳಿದ ಕೆ.ಗೌತಮ್​​ ಕೇವಲ 56 ಎಸೆತಗಳಲ್ಲಿ 13 ಭರ್ಜರಿ ಸಿಕ್ಸರ್​​, 7 ಬೌಂಡರಿ ಸಮೇತ 134 ರನ್ ಗಳಿಸಿ ಅಜೇಯರಾಗಿ ಉಳಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಗೌತಮ್​ ಶಿವಮೊಗ್ಗ ಬೌಲರ್​​​ಗಳನ್ನು ಬೆಂಡೆತ್ತಿದ್ರು. ನಡುವೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ರಿಂದ ಪಂದ್ಯವನ್ನು 17 ಓವರಿಗೆ ಕಡಿತಗೊಳಿಸಲಾಯಿತು. ಆದ್ರೆ ಆ ವೇಳೆಗಾಗ್ಲೆ ಬಳ್ಳಾರಿ 203 ರನ್ನ್​​ಗಳ ಬೃಹತ್​ ಮೊತ್ತವನ್ನು ಪೇರಿಸಿತ್ತು.

ಇನ್ನು ಈ ಗುರಿಯನ್ನು ಬೆಂಬೆತ್ತಿದ ಶಿವಮೊಗ್ಗ ತಂಡಕ್ಕೆ ಕೆ. ಗೌತಮ್​​ ಬೌಲಿಂಗ್​ನಲ್ಲೂ ಸಿಂಹಸ್ವಪ್ನರಾಗಿ ಕಾಡಿದ್ರು. ಆರಂಭದಿಂದಲೇ ಮಾರಕವಾಗಿ ಪರಿಣಮಿಸಿದ ಅವ್ರು 4 ಓವರ್​​ಗಳಲ್ಲಿ 15 ರನ್​​ ನೀಡಿ 8 ವಿಕೆಟ್​​ಗಳನ್ನು ಪಡೆದ್ರು. ಗೌತಮ್​​ ಬೌಲಿಂಗ್​ಗೆ ತತ್ತರಿಸಿದ ಶಿವಮೊಗ್ಗ ತಂಡ 16.3 ಓವರ್​​ಗೆ 133 ರನ್​​ಗೆ ಆಲೌಟ್​​​ ಆಯಿತು.

ಇನ್ನು ಈ ಪಂದ್ಯದಲ್ಲಿ 39 ಎಸೆತಗಳಿಗೆ ಶತಕ ಬಾರಿಸಿದ ಕೆ.ಗೌತಮ್​ ಕೆಪಿಎಲ್​​ ಇತಿಹಾಸದಲ್ಲೇ ಅತೀ ವೇಗದ ಶತಕ ಬಾರಿಸಿದ ಕೀರ್ತಿಗೆ ಪಾತ್ರರಾದ್ರು. ಅಲ್ಲದೇ, ಅತೀ ಹೆಚ್ಚು ಸಿಕ್ಸರ್ಸ್​​(13), ಅತೀ ಹೆಚ್ಚು ವೈಯಕ್ತಿಕ ಸ್ಕೋರ್​(134), ಹಾಗೂ ಜೊತೆಗೆ 8 ವಿಕೆಟ್​​ಗಳನ್ನು ಪಡೆದ ಗೌತಮ್​ ಆಲೌಂಡರ್​​​ ಆಟದ ಮೂಲಕ ಟಿ.20ಯಲ್ಲಿ ಇತಿಹಾಸ ಬರೆದ್ರು.

RELATED ARTICLES

Related Articles

TRENDING ARTICLES