ಆ್ಯಂಟಿಗುವಾ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಟೆಸ್ಟ್ನ ಪ್ರಥಮ ಇನ್ನಿಂಗ್ಸ್ನಲ್ಲಿ 222 ರನ್ನಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯ್ತು. ಮೊದಲು ಬ್ಯಾಟಿಂಗ್ ಮಾಡಿ 297 ರನ್ ಗಳಿಸಿದ್ದ ಟೀಮ್ ಇಂಡಿಯಾ ಪ್ರಥಮ ಇನ್ನಿಂಗ್ಸ್ನಲ್ಲಿ 75 ರನ್ಗಳ ಮುನ್ನಡೆಯನ್ನು ಪಡೆದಿದೆ.
ಎರಡನೇ ದಿನವಾದ ಶುಕ್ರವಾರ ಬ್ಯಾಟಿಂಗ್ ಆರಂಭಿಸಿದ್ದ ಕೆರಿಬಿಯನ್ನರು, ಇಶಾಂತ್ ಶರ್ಮಾರ ಮಾರಕ ಬೌಲಿಂಗ್ಗೆ ತತ್ತರಿಸಿ 56 ಓವರಿಗೆ 8 ವಿಕೆಟ್ಗಳನ್ನು ಕಳೆದುಕೊಂಡು 188 ರನ್ಗಳನ್ನು ಪೇರಿಸಿದ್ರು. ಇಂದು ವೆಸ್ಟ್ ಇಂಡೀಸ್ನ ಉಳಿದ 2 ವಿಕೆಟ್ಗಳನ್ನು ಬೇಗನೇ ಉರುಳಿಸುವ ಲೆಕ್ಕಾಚಾರ ಕೊಹ್ಲಿ ಪಡೆಯದಾಗಿತ್ತು. ಆದ್ರೆ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಕ್ಯಾಪ್ಟನ್ ಜೇಸನ್ ಹೋಲ್ಡರ್ ಮತ್ತು ಕಮ್ಮಿನ್ಸ್ ಅವರು ಟೀಮ್ ಇಂಡಿಯಾ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ್ರು. ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ದ ಅವರು 74 ಓವರಿನವೆರಗೂ ಕ್ರೀಸ್ ಕಾಯ್ದುಕೊಂಡ್ರು. 65 ಎಸೆತಗಳಿಗೆ 39 ರನ್ ಗಳಿಸಿ ಶಮಿ ಓವರಿನಲ್ಲಿ ಜೇಸನ್ ಹೋಲ್ಡರ್ ಕೀಪರ್ ರಿಷಬ್ ಪಂತ್ಗೆ ಕ್ಯಾಚ್ ನೀಡಿದ್ರೆ, 45 ಎಸೆತಗಳನ್ನು ಎದುರಿಸಿ ಖಾತೆಯನ್ನೇ ತೆರೆಯದ ಮಿಗಲ್ ಕಮ್ಮಿನ್ಸ್ ಅಂತಿಮವಾಗಿ ರವೀಂದ್ರ ಜಡೇಜರಿಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಕೊನೆಯವರಾಗಿ ಬ್ಯಾಟಿಂಗ್ಗೆ ಇಳಿದ ಗ್ಯಾಬ್ರಿಯಲ್ 5 ರನ್ ಗಳಿಸಿ ಅಜೇಯರಾಗುಳಿದ್ರು. ಅಂತಿಮವಾಗಿ ನಿನ್ನೆಯ ಮೊತ್ತಕ್ಕೆ 34 ರನ್ ಸೇರಿಸಿದ ವೆಸ್ಟ್ ಇಂಡೀಸ್ 222 ರನ್ನಿಗೆ ತನ್ನ ಮೊದಲ ಇನ್ನಿಂಗ್ಸ್ಗೆ ತೆರೆ ಎಳೆಯಿತು. ಇನ್ನು ಭಾರತದ ಪರ ಇಶಾಂತ್ ಶರ್ಮಾ 5 ವಿಕೆಟ್ಗಳನ್ನು ಪಡೆದು ಮಿಂಚಿದ್ರೆ, ಶಮಿ, ಜಡೇಜಾ ತಲಾ 2 ಹಾಗೂ ಬೂಮ್ರಾ 1 ವಿಕೆಟ್ ಪಡೆದ್ರು.
ಇನ್ನು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಮ್ ಇಂಡಿಯಾ ಊಟದ ವಿರಾಮದ ವೇಳೆಗೆ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದ್ದಾರೆ.