Saturday, January 11, 2025

ಅರುಣ್ ಜೇಟ್ಲಿಗೂ ಕ್ರಿಕೆಟರ್ಸ್​​​ಗೂ ಅವಿನಾಭಾವ ಸಂಬಂಧ! ಕೊಹ್ಲಿ, ಸೆಹ್ವಾಗ್​​​​ಗೆ ಧೈರ್ಯ ತುಂಬಿದ್ದೇ ಇವರು!

ನವದೆಹಲಿ: ಇಂದು ಹಿರಿಯ ರಾಜಕೀಯ ಮುತ್ಸದ್ಧಿ ಅರುಣ್​​​ ಜೇಟ್ಲಿಯವರನ್ನು ಭಾರತ ದೇಶ ಕಳೆದುಕೊಂಡಿದೆ. ತೀವ್ರ ಅನಾರೋಗ್ಯದಿಂದ ಅವರು ಇಂದು ಏಮ್ಸ್​​​ ಆಸ್ಪತ್ರೆಯಲ್ಲಿ ಅಸ್ತಂಗತರಾದ್ರು. ಸಜ್ಜನ ರಾಜಕಾರಣಿಯಾಗಿದ್ದ ಅವರು ಬಿಜೆಪಿಯಲ್ಲಿ ಮಾತ್ರವಲ್ಲದೇ ಇತರ ಪಕ್ಷಗಳಲ್ಲೂ ತಮ್ಮ ಸ್ನೇಹಿತರನ್ನು, ಅಭಿಮಾನಿಗಳನ್ನು ಹೊಂದಿದ್ರು. ಎಂತಹ ಕಠಿಣ ಪರಿಸ್ಥಿಯನ್ನೂ ನಿಭಾಯಿಸುವ ಅವರ ಗುಣ ಎಲ್ಲರಿಗೂ ಮಾದರಿಯಾಗಿತ್ತು. ಇನ್ನು ಅರುಣ್​ ಜೇಟ್ಲಿಯವರ ನಾಯಕತ್ವ ಗುಣ, ರಾಜಕೀಯ ಚಾಣಕ್ಷತೆ ಎಲ್ಲರಿಗೂ ತಿಳಿದಿರೋ ವಿಚಾರ. ಆದ್ರೆ ಅವರಿಗೂ ಇಂಡಿಯನ್​​ ಕ್ರಿಕೆಟರ್ಸ್​​​ಗೂ ಅವಿನಾಭಾವ ಸಂಬಂಧವಿದೆ. ಅದ್ರಲ್ಲೂ ವಿರೇಂದ್ರ ಸೆಹ್ವಾಗ್​​, ವಿರಾಟ್ ಕೊಹ್ಲಿ, ಆಶಿಶ್​​ ನೆಹ್ರಾರಿಗೆ ಧೈರ್ಯ ತುಂಬಿದ್ದೇ ಅರುಣ್​​​ ಜೇಟ್ಲಿಯವರು.

ಹೌದು. ಅಚ್ಚರಿಯಾದ್ರೂ ಇದು ಸತ್ಯ. 1999 ರಿಂದ 2012 ರವರೆಗೆ ಅರುಣ್​​ ಜೇಟ್ಲಿಯವರು ದೆಹಲಿ ಕ್ರಿಕೆಟ್​​ ಅಸೋಸಿಯೇಶನ್​​​​ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ರು. ತಮ್ಮ 13 ವರ್ಷಗಳ  ಸೇವಾವಧಿಯಲ್ಲಿ ಜೇಟ್ಲಿಯವರು ಅಪಾರ ಕೊಡುಗೆಗಳನ್ನು ನೀಡಿದ್ರು. ದೆಹಲಿಯ ಯುವ ಆಟಗಾರರ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಪ್ರತಿಭೆ ಬೆಳಗುವಂತೆ ಜೇಟ್ಲಿಯವರು ಮಾಡಿದ್ರು. ಇಶಾಂತ್​​ ಶರ್ಮಾ, ಆಶೀಶ್​​ ನೆಹ್ರಾರಂತಹ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್​​​ಗೆ ಕಾಲಿಟ್ಟಿದ್ದೇ ಇವರ ಕಾಲದಲ್ಲಿ. ಅದರಲ್ಲೂ ಆಶೀಶ್​​ ನೆಹ್ರಾರವರು ಗಾಯಗೊಂಡಿದ್ದ ವೇಳೆ ಅವರ ಆಸ್ಪತ್ರೆ ಖರ್ಚನ್ನೂ ಜೇಟ್ಲಿಯವರು ಭರಿಸಿದ್ರಂತೆ.

ಇನ್ನು ವಿಶೇಷವೆಂದರೇ, ಭಾರತದ ಮಾಜಿ ಓಪನರ್​​ ವಿರೇಂದ್ರ ಸೆಹ್ವಾಗ್​​ರವರು ತಮ್ಮ ಜೀವನದಲ್ಲಿ ಅರುಣ್​​ ಜೇಟ್ಲಿಯವರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಒಂದು ಕಾಲದಲ್ಲಿ ಸೆಹ್ವಾಗ್​​ ದೆಲ್ಲಿ ತಂಡವನ್ನು ತೊರೆದು ಹರಿಯಾಣ ತಂಡವನ್ನು ಸೇರುವ ನಿರ್ಧಾರ ಮಾಡಿದ್ರು. ಆ ಸಂದರ್ಭದಲ್ಲಿ ಸ್ವತಃ ಅರುಣ್​​ ಜೇಟ್ಲಿಯವರೇ ಸೆಹ್ವಾಗ್​​ರವರ ಮನೆಗೆ ಆಗಮಿಸಿ ತಮ್ಮ ನಿರ್ಧಾರವನ್ನು ಹಿಂತೆಗೆದೆಕೊಳ್ಳುವಂತೆ ಮನವಿ ಮಾಡಿದ ಬಳಿಕ ಸೆಹ್ವಾಗ್​​ರವರು ಅವರ ನಿರ್ಧಾರವನ್ನು ಬದಲಾಯಿಸಿದ್ರು. ಇಂದು ಜೇಟ್ಲಿಯವರು ವಿಧಿವಶರಾದಾಗ ವಿರೇಂದ್ರ ಸೆಹ್ವಾಗ್​​ ಟ್ವೀಟ್​​ ಮೂಲಕ ತೀವ್ರ ಸಂತಾಪ ಸೂಚಿಸಿದ್ದಾರೆ. ಅರುಣ್​ ಜೇಟ್ಲಿ ಅವರ ನಿಧನ ನನಗೆ ತುಂಬಾ ನೋವು ತಂದಿದೆ. ದೆಹಲಿ ಮತ್ತು ದೇಶದ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಅಪಾರ. ಡಿಡಿಸಿಎ ಚೇರ್ಮನ್​ ಕೂಡ ಆಗಿದ್ದ ಅವರು ಕ್ರಿಕೆಟಿಗರನ್ನು ಪ್ರೋತ್ಸಾಹಿಸುತ್ತಿದ್ರು. ಆಟಗಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತಿದ್ರು ಎಂದು ಸೆಹ್ವಾಗ್ ಜೇಟ್ಲಿಯವ್ರನ್ನು ಸ್ಮರಿಸಿಕೊಂಡ್ರು.

ಅರುಣ್​​ ಜೇಟ್ಲಿಯವರು ಭಾರತೀಯ ಕ್ರಿಕೆಟ್​​ಗೆ ಮಹಾನ್​​ ಪ್ರತಿಭೆಗಳನ್ನು ನೀಡಿದ್ದಾರೆ. ಅದ್ರಲ್ಲಿ ವಿರಾಟ್​​ ಕೊಹ್ಲಿ ಪ್ರಮುಖರು. ​ ಕೊಹ್ಲಿಯವರ ಕ್ರಿಕೆಟ್​ ಕರಿಯರ್​ನಲ್ಲಿ ಮಹತ್ವದ ಪಾತ್ರವನ್ನು ಅರುಣ್​ ಜೇಟ್ಲಿ ವಹಿಸಿದ್ರು. ಜ್ಯೂನಿಯರ್​ ವಿಭಾಗದಲ್ಲಿ ಆಡುವಾಗ ತಂದೆಯನ್ನು ಕಳೆದುಕೊಂಡಿದ್ದ ವಿರಾಟ್​ ಕೊಹ್ಲಿಗೆ ಆಗ ಡಿಡಿಸಿಎ ಚೇರ್ಮನ್​ ಆಗಿದ್ದ ಅರುಣ್​ ಜೇಟ್ಲಿ ಅವರಿಂದ ಪ್ರೋತ್ಸಾಹ ಸಿಕ್ಕಿತ್ತು ಎಂದು ಸ್ವತಃ ವಿರಾಟ್​​ ಕೊಹ್ಲಿಯವ್ರೇ ಹಿಂದೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ದೆಹಲಿ ಕ್ರಿಕೆಟ್​​​​​ ಅಸೋಸಿಯೇಶನ್​​​ನಲ್ಲಿ ಆಡಿದ ನಿವೃತ್ತ ಆಟಗಾರರಿಗೆ ಪೆನ್ಶನ್​​ ನೀಡೋ ಯೋಜನೆಯನ್ನು ಕೂಡ ಅವರು ಪ್ರಾರಂಭಿಸಿದ್ರು. ಜೇಟ್ಲಿಯವರು ಇಂದು ನಿಧನರಾದಾಗ ಸಚಿನ್​​​ ತೆಂಡೂಲ್ಕರ್​​, ರವಿಶಾಸ್ತ್ರಿ, ಅನಿಲ್​​ ಕುಂಬ್ಳೆ, ವಿವಿಎಸ್​​ ಲಕ್ಷ್ಮಣ್​,ಸುರೇಶ್​ ರೈನಾ ಸೇರಿದಂತೆ ಹಲವಾರು ಆಟಗಾರರು ಸಂತಾಪ ವ್ಯಕ್ತಪಡಿಸಿದ್ರು. ರಾಜಕಾರಣಿಯಾಗಿ ಮಾತ್ರವಲ್ಲದೇ ಕ್ರಿಕೆಟ್​​​​ ಕ್ಷೇತ್ರದಲ್ಲೂ ಅವರು ತಮ್ಮ ಗಣನೀಯ ಸೇವೆಯನ್ನು ಸಲ್ಲಿಸಿದ್ರು. ಹೀಗೆ ಭಾರತೀಯ ಕ್ರಿಕೆಟ್​​ಗೆ ಅಪಾರ ಕೊಡುಗೆ ನೀಡಿದ್ದ ಅರುಣ್​​ ಜೇಟ್ಲಿಯವರು ಇನ್ನು ನೆನಪು ಮಾತ್ರ.

 

 

RELATED ARTICLES

Related Articles

TRENDING ARTICLES