Tuesday, January 14, 2025

ಟೆಸ್ಟ್​​ನಲ್ಲೂ ಗೆಲುವಿನ ಅಭಿಯಾನ ಮುಂದುವರೆಸುತ್ತಾ ಟೀಮ್ ಇಂಡಿಯಾ?

ವರ್ಲ್ಡ್​​ಕಪ್​​ ಬಳಿಕ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಇಂದು ಆರಂಭವಾಗಲಿರುವ ಮೊದಲ ಟೆಸ್ಟ್​ ಲ್ಲಿ ಅತಿಥೇಯ ವೆಸ್ಟ್​ ಇಂಡೀಸ್ ತಂಡವನ್ನು ಎದುರಿಸಲಿದೆ.
ಈಗಾಗಲೇ ಟಿ20 ಮತ್ತು ಒಡಿಐ ಸರಣಿಯನ್ನು ಕ್ಲೀನ್​ ಸ್ವೀಪ್ ಮಾಡಿರುವ ಭಾರತ ಎರಡು ಪಂದ್ಯಗಳ ಟೆಸ್ಟ್​ ಸರಣಿಯನ್ನೂ ಕೈ ವಶ ಮಾಡಿಕೊಳ್ಳುವ ತವಕದಲ್ಲಿದೆ. ಅತ್ತ ವೆಸ್ಟ್ ಇಂಡೀಸ್​ ಟಿ20, ಒಡಿಐ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಎದುರು ನೋಡುತ್ತಿದೆ. ಇನ್ನೊಂದು ವಿಶೇಷವೆಂದರೆ ಭಾರತ ಕಳೆದ 17 ವರ್ಷಗಳಿಂದ ಈ ಸರಣಿಯಲ್ಲಿ ಎಂದೂ ವಿಂಡೀಸ್ ವಿರುದ್ಧ ಸೋತಿಲ್ಲ..!
ಇನ್ನು ಟೀಮ್ ಇಂಡಿಯಾವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದು ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ ಹಾಗೂ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಜೊತೆಗೆ ಕನ್ನಡಿಗರಾದ ಕೆ.ಎಲ್ ರಾಹುಲ್, ಮಯಾಂಕ್ ಅಗರ್​ವಾಲ್​ ಬ್ಯಾಟಿಂಗ್ ಬಲವಾಗಿದ್ದು, ತಂಡದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳಲು ಈ ಸರಣಿ ಒಂದೊಳ್ಳೆ ವೇದಿಕೆಯಾಗಿದೆ. ಅಷ್ಟೇ ಅಲ್ಲದೆ ಯುವ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್​ ರಿಷಭ್ ಪಂತ್ ಕೂಡ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲೇ ಬೇಕಿದೆ. ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ಪ್ರಮುಖ ಬೌಲಿಂಗ್ ಅಸ್ತ್ರಗಳಾಗಿದ್ದಾರೆ. ರವಿಂದ್ರ ಜಡೇಜಾ, ಆರ್. ಅಶ್ವಿನ್ ಅವರ ಆಲ್​ರೌಂಡ್ ಆಟದ ಬಲ ಕೂಡ ಟೀಮ್ ಇಂಡಿಯಾಕ್ಕಿದೆ.
ವೆಸ್ಟ್ ಇಂಡೀಸ್​ಗೆ ಉತ್ತಮ ಫಾರ್ಮ್​​ನಲ್ಲಿರುವ ನಾಯಕ ಜೇಸನ್​ ಹೋಲ್ಡರ್​, ಕೇಮರ್​ ರೋಚ್​, ಗ್ಯಾಬ್ರಿಯಲ್​ ಆಧಾರವಾಗಿದ್ದಾರೆ. ಡರೇನ್ ಬ್ರಾವೋ ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​ಗಳಿಗೆ ಸಿಂಹಸ್ವಪ್ನವಾಗಿ ಕಾಡುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
ಆಂಟಿಗುವಾದ ವಿವಿಯನ್​ ರಿಚರ್ಡ್ಸ್​ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಸಂಜೆ 7ಗಂಟೆಗೆ ಪಂದ್ಯ ಆರಂಭವಾಗಲಿದೆ.

RELATED ARTICLES

Related Articles

TRENDING ARTICLES