ನವದೆಹಲಿ: ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಪ್ರಾದೇಶಿಕ ಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‍ಡಿಎಫ್)ನ 13 ಶಾಸಕರ ಪೈಕಿ 10 ಹಾಲಿ ಶಾಸಕರು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದ್ರು. ಬಳಿಕ ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ್ರು.
ಬಿಜೆಪಿಯ ಮೈತ್ರಿ ಪಕ್ಷವಾಗಿದ್ದ ಎಸ್‍ಡಿಎಫ್ ಈ ಹಿಂದೆ ಸಿಕ್ಕಿಂನಲ್ಲಿ 25 ವರ್ಷ ಅಧಿಕಾರ ನಡೆಸಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್‍ಡಿಎಫ್ ಸೋಲನುಭವಿಸಿತ್ತು. ಇದೀಗ ಎಸ್ಡಿಎಫ್ನ 10 ಶಾಸಕರ ಸೇರ್ಪಡೆಯೊಂದಿಗೆ ಬಿಜೆಪಿ ಸಿಕ್ಕಿಂನಲ್ಲಿ ಪ್ರಮುಖ ಪ್ರತಿಪಕ್ಷವಾಗಲಿದೆ. ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಬಲವರ್ಧನೆಗೂ ಇದು ನೆರವಾಗಲಿದೆ.