Saturday, May 10, 2025

ಫಾರ್ಮ್​ಗೆ ಮರಳಿದ ರಿಷಭ್ ಪಂತ್ – ಕೊಹ್ಲಿ ಪಡೆಯ ಆರ್ಭಟಕ್ಕೆ ವಿಂಡೀಸ್​ ಉಡೀಸ್​ ..!

ಗಯಾನಾ : ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 3ನೇ ಟಿ20 ಮ್ಯಾಚ್​​ನಲ್ಲಿ ವೆಸ್ಟ್​ ಇಂಡೀಸ್ ವಿರುದ್ಧ 7 ವಿಕೆಟ್​ಗಳ ಭರ್ಜರಿ ಜಯ ದಾಖಲಿಸುವುದರೊಂದಿಗೆ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.
ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮ್ಯಾಚ್​ನಲ್ಲಿ ಟಾಸ್​ ಗೆದ್ದ ಭಾರತ ವೆಸ್ಟ್ ಇಂಡೀಸ್ ಅನ್ನು ಬ್ಯಾಟಿಂಗ್​ಗೆ ಆಮಂತ್ರಿಸಿತು. ಪ್ರವಾಸಿ ತಂಡದ ಆಹ್ವಾನವನ್ನು ಸ್ವೀಕರಿಸಿ ಮೊದಲು ಬ್ಯಾಟಿಂಗ್​​ಗೆ ಇಳಿದ ವಿಂಡೀಸ್​ ಯುವ ವೇಗಿ ದೀಪಕ್ ಚಹಾರ್​ ಮಾರಕ ದಾಳಿಗೆ ತತ್ತರಿಸಿತು. ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳ್ಕೊಂಡ ವಿಂಡೀಸ್ ಗಳಿಸಿದ್ದು 146ರನ್​ಗಳನ್ನು ಮಾತ್ರ..! ಕಿರಾನ್ ಪೊಲಾರ್ಡ್​ (58) ಮತ್ತು ರೋವ್ಮನ್​​​ ಪೌವೆಲ್​ (ಅಜೇಯ 32) ಹೊರತು ಪಡಿಸಿದ್ರೆ ಉಳಿದವರಿಂದ ಅಂಥಾ ರನ್​ ಮಳೆ ಬರಲೇ ಇಲ್ಲ. ಭಾರತದ ಪರ ದೀಪಕ್ ಚಹಾರ್ 3 ಓವರ್​​ನಲ್ಲಿ ,ಕೇವಲ 4ರನ್ ನೀಡಿ 3 ವಿಕೆಟ್​ ಕಿತ್ತು ಹೀರೊ ಆದ್ರು. ಪದಾರ್ಪಣ ಮ್ಯಾಚ್​ನಲ್ಲೇ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ನವದೀಪ್ ಸೈನಿ 4 ಓವರ್​ ಗಳಲ್ಲಿ 34ರನ್ ನೀಡಿ 2 ವಿಕೆಟ್ ಪಡೆದ್ರು. ರಾಹುಲ್ ಚಹಾರ್ 1 ವಿಕೆಟ್ ಕಿತ್ರು.
147ರನ್​ಗಳನ್ನು ಬೆನ್ನತ್ತಿದ ಭಾರತ ಕೇವಲ 10ರನ್ ಆಗಿದ್ದಾಗ ಶಿಖರ್ ಧವನ್ (3) ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತ್ತು. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ತಂಡ ಕೂಡಿಕೊಂಡು ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗ ಕೆ.ಎಲ್ ರಾಹುಲ್ ( 20) ಹಾಗೂ 3ನೇ ಕ್ರಮಾಂಕದಲ್ಲಿಳಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ (59) ಚೇತರಿಕೆ ನೀಡುವ ಪ್ರಯತ್ನವನ್ನು ಮಾಡಿದ್ರು. ಆದರೆ, ತಂಡದ ಮೊತ್ತ 27ರನ್​ ಆಗಿದ್ದಾಗ ರಾಹುಲ್ ಅಲೆನ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ನಾಯಕನ ಜೊತೆಗೂಡಿದ ಯುವ ಆಟಗಾರ ರಿಷಭ್ ಪಂತ್ (ಅಜೇಯ 65) 106ರನ್​ಗಳ ಜೊತೆಯಾಟವಾಡಿದ್ರು. ತಂಡದ ಗೆಲುವಿಗೆ ಕೇವಲ 13ರನ್​ ಬೇಕಿದ್ದಾಗ ವಿರಾಟ್ ಔಟಾದ್ರು. ಬಳಿಕ ಪಂತ್ ಕನ್ನಡಿಗ ಮನೀಷ್ ಪಾಂಡೆ (2) ಪಂತ್ ಜೊತೆಯಾದ್ರು. ಇವರಿಬ್ಬರು ಗೆಲುವಿನ ಔಪಚಾರಿಕತೆ ಪೂರೈಸಿದ್ರು. ದೀಪಕ್ ಚಹಾರ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದ್ರು, ಕೃಣಾಲ್ ಪಾಂಡ್ಯ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ್ರು.

RELATED ARTICLES

Related Articles

TRENDING ARTICLES