ಸುಷ್ಮಾ ಸ್ವರಾಜ್.. ಬರೀ ಹೆಸರಲ್ಲ, ಬಹು ದೊಡ್ಡ ಶಕ್ತಿ..! ಬಿಜೆಪಿಯ ಕಟ್ಟಾಳಾಗಿದ್ದರೂ ಪಕ್ಷಾತೀತವಾಗಿ ಎಲ್ಲರೂ ಮೆಚ್ಚಿದ ಮಹಾ ನಾಯಕಿ…ಅದ್ಭುತ ವಾಗ್ಮಿ. ರಾಷ್ಟ್ರ ರಾಜಕಾರಣ ಕಂಡ ಮಹಾನ್ ನಾಯಕರಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಮಹಾನ್ ನಾಯಕಿ..! ಸದಾ ಜನರ ಕಷ್ಟಕ್ಕೆ ಮಿಡಿಯುವ ಮಾತೃ ಹೃದಯಿ. ಅಧಿಕಾರದ ಗದ್ದುಗೆಗೆ ಅಂಟಿ ಕುಳಿತವರಲ್ಲ…ಅಧಿಕಾರ ದಾಹ ಇವರಲ್ಲಿ ಇರಲೇ ಇಲ್ಲ..! ಅಧಿಕಾರ, ಹಣ. ಸ್ಥಾನಮಾನ ಹೀಗೆ ಎಲ್ಲವೂ ತನ್ನ ಕಾಲಬುಡದಲ್ಲೇ ಇದ್ದರೂ ಎಂದೂ ಕೂಡ ಅಹಂ ಇವರ ಬಳಿ ಸುಳಿದಿರಲಿಲ್ಲ! ತುಂಬಿದ ಕೊಡ ತುಳುಕುವುದಿಲ್ಲ ಅನ್ನುವಂತೆ ಸುಷ್ಮಾ ಸ್ವರಾಜ್ ಎಲ್ಲರೊಳಗೊಂದಾಗಿ ಇದ್ದವರು.
ರಾಷ್ಟ್ರ ರಾಜಕಾರಣದ ಈ ಮಹಾನಾಯಕಿ ಹೇಳದೆ ಕೇಳದೆ… ಸ್ವಲ್ಪವೂ ಸುಳಿವು ನೀಡದೆ ಇಹಲೋಕ ತ್ಯಜಿಸಿದ್ದಾರೆ..! ದೆಹಲಿಯ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ಕನ್ನಡಿಗರಲ್ಲದೇ ಇದ್ರು ಕರುನಾಡ ಮಗಳಾಗಿದ್ದರು..! ಕನ್ನಡವನ್ನು ಕಲಿತಿದ್ದರು..!
ಹೌದು, ಹರಿಯಾಣದಲ್ಲಿ ಹುಟ್ಟಿ ಬೆಳೆದ ಸುಷ್ಮಾ ಸ್ವರಾಜ್ ರಾಜಕೀಯ ನೆಲೆ ಕಂಡುಕೊಂಡಿದ್ದು, ಹರಿಯಾಣ, ಮಧ್ಯ ಪ್ರದೇಶ ಹಾಗೂ ನವದೆಹಲಿಯಲ್ಲಿ. ಆದರೆ, ಕರ್ನಾಟಕಕ್ಕೂ ತುಂಬಾ ಆಪ್ತರಾಗಿದ್ದರು. ಸುಷ್ಮಾ ಸ್ವರಾಜ್ ಅವರು ಕರುನಾಡಿಗೆ ರಾಜಕಾರಣಿಯಾಗಿ ಹತ್ತಿರವಾದವರಲ್ಲ. ಬದಲಾಗಿ ಅಮ್ಮನಾಗಿ, ಮನೆ ಮಗಳಾಗಿದ್ದವರು..!
1999ರಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಕರ್ನಾಟಕದ ಬಳ್ಳಾರಿಯಿಂದ ಲೋಕಸಭಾ ಅಖಾಡಕ್ಕೆ ಇಳಿದಿದ್ದರು. ಅವರಿಗೆ ಪ್ರತಿಸ್ಪರ್ಧಿಯಾಗಿ ಬಿಜೆಪಿಯಿಂದ ಕಣಕ್ಕಿಳಿದಿದ್ದು ಸುಷ್ಮಾ ಸ್ವರಾಜ್..! ಆ ಚುನಾವಣೆ ಪ್ರಚಾರಕ್ಕೆ ಬಂದಿದ್ದಾಗ ಡಾ. ಶ್ರೀನಿವಾಸಮೂರ್ತಿಯವರ ಮನೆಯಲ್ಲಿ ನಡೆದ ವರಮಹಾಲಕ್ಷ್ಮಿ ಪೂಜೆಯಲ್ಲಿ ಅವರು ಪಾಲ್ಗೊಂಡಿದ್ದರು. ನಾನು ಎಲೆಕ್ಷನ್ನಲ್ಲಿ ಗೆಲ್ಲಲಿ, ಸೋಲಲಿ ಪ್ರತೀ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬಂದೇ ಬರ್ತೀನಿ ಅಂತ ಮಾತು ಕೊಟ್ಟಿದ್ರು. ಆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಎದುರು ಸೋಲನುಭವಿಸಿದರೂ ಸುಷ್ಮಾ ಸ್ವರಾಜ್ ತಾವು ನೀಡಿದ್ದ ವಾಗ್ದಾನದಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರ್ತಿದ್ರು..! ಜೊತೆಗೆ ಕನ್ನಡವನ್ನೂ ಕಲಿತಿದ್ದರು.
ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿಯವರ ವಿಶೇಷ ಹೆಲಿಕಾಪ್ಟರ್ನಲ್ಲಿ ಬಳ್ಳಾರಿಗೆ ಬರ್ತಿದ್ದ ಸುಷ್ಮಾ ಸ್ವರಾಜ್ ವರಮಹಾಲಕ್ಷ್ಮಿ ಹಬ್ಬದ ಪೂಜೆ ಮಾಡಿ, ಬಾಗೀನ ಪಡೆದು, ಬಾಗೀನ ನೀಡಿ ಹೋಗ್ತಿದ್ರು. ಅಷ್ಟೇ ಅಲ್ಲದೆ ಶ್ರೀರಾಮುಲು ನಡೆಸುತ್ತಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಸುಷ್ಮಾ ಬರ್ತಿದ್ರು. 1999ರಿಂದ 2011ರವರೆಗೂ ಪ್ರತೀವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರುತ್ತಿದ್ದ ಸುಷ್ಮಾ ಸ್ವರಾಜ್ 2011ರ ಬಳಿಕ ನಡೆದ ರಾಜ್ಯ ರಾಜಕಾರಣದ ಬೆಳವಣಿಗೆ, ಅಕ್ರಮ ಗಣಿಗಾರಿಕೆ ಹಗರಣ ಬಹು ದೊಡ್ಡ ಸುದ್ದಿಯಾದ್ಮೇಲೆ ವರಮಹಾಲಕ್ಷ್ಮಿ ಹಬ್ಬಕ್ಕೆ ಬಳ್ಳಾರಿಗೆ ಬರೋದನ್ನು ನಿಲ್ಲಿಸಿದ್ರು. ಇನ್ನೇನು ಎರಡೇ ಎರಡು ದಿನ ಕಳೆದ್ರೆ ವರಮಹಾಲಕ್ಷ್ಮಿ ಹಬ್ಬ.. ಕರುನಾಡ ಮಗಳು ಸುಷ್ಮಾ ಬಾರದ ಲೋಕಕ್ಕೆ ಪಯಣಿಸಿದ್ದಾರೆ..!
ಮಾತೃ ಹೃದಯಿ ನಾಯಕಿಯ ಅಗಲಿಕೆಗೆ ಪ್ರಧಾನಿ ಮೋದಿ ಕಂಬನಿ
ಇಲ್ಲಿವೆ ಅಜಾತಶತ್ರು ಸುಷ್ಮಾ ಸ್ವರಾಜ್ರವರ ಅಪರೂಪದ ಫೋಟೋಗಳು
ಚತುರ ನಾಯಕಿಯ ಹೆಜ್ಜೆ ಗುರುತು – ಹೇಗಿತ್ತು ಗೊತ್ತಾ ಸುಷ್ಮಾ ಸ್ವರಾಜ್ ಬದುಕಿನ ಹಾದಿ?
‘ನಾನು ಜೀವನವಿಡಿ ಈ ದಿನಕ್ಕೆ ಕಾಯ್ತಿದ್ದೆ’ : ಸುಷ್ಮಾ ಸ್ವರಾಜ್ ಕೊನೆಯ ಟ್ವೀಟ್..!
ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ವಿಧಿವಶ