ಎತ್ತ ನೋಡಿದರೂ ಹಚ್ಚ ಹಸಿರಿನಿಂದ ಕೂಡಿರುವ ಪರಿಸರ… ನಡುವೆ ಮನಸ್ಸಿಗೆ ಮುದ ನೀಡುವ ಪಕ್ಷಿಗಳ ಕಲರವ… ಅಲ್ಲಲ್ಲಿ ಬೆಳ್ನೊರೆಗಳನ್ನು ಚಿಮ್ಮಿಸುತ್ತಾ, ಸ್ವತಂತ್ರ್ಯದ ಪ್ರತೀಕವೆಂಬಂತೆ ಹರಿಯುವ ನದಿ, ತೊರೆಗಳ ಜುಳು ಜುಳು ನಾದ.. ವಾಹನ ಸವಾರಿಯಲ್ಲಿ ಸಾಹಸಕತೆಯನ್ನು ಬಯಸುವವರಿಗೆ ಹೇಳಿ ಮಾಡಿಸುವಂತಿರುವ ರಸ್ತೆಗಳು..! ಒಟ್ಟಾರೆಯಾಗಿ ಪ್ರಕೃತಿ ಮಾತೆಯೇ ಮೈತಳೆದು ನಿಂತಿದ್ದಾಳೇನೋ ಎಂದು ಕಣ್ಣಿಗೆ ಭಾಸವಾಗುವಂತಹ ರಮಣೀಯತೆ..! ಇದು ಪ್ರಕೃತಿ ಪ್ರಿಯರನ್ನು, ಚಾರಣಾಸಕ್ತರನ್ನು ಕೈಬೀಸಿ ಕರೆಯುವ ಬಿಸ್ಲೆ ಘಾಟ್‍ನ ನಯನ ಮನೋಹರ ದೃಶ್ಯ.
ದಕ್ಷಿಣ ಕನ್ನಡ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಹೊಂದಿಕೊಂಡಿರುವ ಬಿಸ್ಲೆ ಘಾಟ್ ಮನಸ್ಸಿನ ಏಕಾತನತೆಯನ್ನು ಕಳೆದು ನೆಮ್ಮದಿಯ ಭಾವನೆಗಳನ್ನು ಅರಳಿಸುವ ಒಂದು ನೈಸರ್ಗಿಕ ಕೇಂದ್ರ. ಕುಕ್ಕೆ ಸುಬ್ರಹ್ಮಣ್ಯದ ಕುಲ್ಕುಂದದಿಂದ ಹೊರಟರೆ ಸುಮಾರು 6ಕಿಮೀ ದೂರದಲ್ಲಿ ಎದುರಾಗುವ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಿಂದ ಆರಂಭವಾಗುವ ಘಾಟ್‍ನಲ್ಲಿ ಸಂಚರಿಸುವುದೇ ಒಂದು ದಿವ್ಯ ಅನುಭವ. ಇನ್ನು ಹಾಸನ ಇಲ್ಲವೇ ಕೊಡಗಿನಿಂದ ಹೊರಟರೆ ಕೂಡುರಸ್ತೆ ದಾಟಿ ಬಿಸ್ಲೆ ಅನ್ನೋ ಸಣ್ಣ ಹಳ್ಳಿಯಿಂದ ಬಿಸ್ಲೆ ಘಾಟ್ ಸೆಕ್ಷನ್ ಸಿಗುತ್ತದೆ. ಈ ಪರಿಸರದಲ್ಲಿ ಅನೇಕ ವೈದ್ಯಕೀಯ ಗಿಡ ಮೂಲಿಕೆಗಳು, ವಿಶಿಷ್ಟ ಜಾತಿಯ ಮರಗಿಡಗಳು, ಅಪರೂಪದ ಪ್ರಾಣಿಪಕ್ಷಿಗಳು ಕೂಡ ಇದ್ದು ಪ್ರಕೃತಿ ಮಾತೆ ಅದರಿಂದ ತನ್ನ ಒಡಲನ್ನು ತುಂಬಿಸಿಕೊಂಡಿದ್ದಾಳೆ.
ಮಳೆಗಾಲದಲ್ಲಂತೂ ಈ ರಸ್ತೆಯಲ್ಲಿ ಪ್ರಯಾಣಿಸುವುದೇ ಒಂಥರಾ ಖುಷಿ. ರಸ್ತೆಯ ಇಕ್ಕೆಲಗಳಲ್ಲಿ ಚಿಕ್ಕ ಚಿಕ್ಕ ತೊರೆಗಳು ಕಾಣಸಿಗುತ್ತವೆ. ತಿರುವು ಮುರುವಾದ ರಸ್ತೆಗಳು ಕಾಡನ್ನು ಸೀಳಿಕೊಂಡು ಹೋಗುವ ಅನುಭವ ನೀಡುತ್ತದೆ. ಪಶ್ಚಿಮಘಟ್ಟಗಳ ದಟ್ಟವಾದ ಕಾಡು ಕಣ್ಣಿಗೆ ನಿಲುಕದು.
ಬಿಸ್ಲೆ ಘಾಟ್‍ನಲ್ಲಿ ಸಂಚಾರ ಮುಂದುವರೆದಂತೆ ವೀಕ್ಷಣಾ ಮಂದಿರವೊಂದು ಎದುರಾಗುತ್ತದೆ. ಪ್ರಕೃತಿಯ ಸೋಜಿಗವನ್ನು ಸವಿಯಲು ನಿರ್ಮಿಸಿರುವ ಈ ಮಂದಿರದಲ್ಲಿ ನಿಂತು ಸುತ್ತ ಒಮ್ಮೆ ಕಣ್ಣಾಡಿಸಿದರೆ, ಬೇರೆಲ್ಲೂ ಕಾಣಸಿಗದ ಪ್ರಾಕೃತಿಕ ದರ್ಶನವಾಗುತ್ತದೆ. ದೃಷ್ಟಿ ನೇರ ಮಾಡಿ ನೋಡಿದಾಗ ಕುಮಾರ ಪರ್ವತದ ರಮಣೀಯ ನೋಟ, ಕೆಳಗಡೆ ಕ್ಷೀರ ಸಾಗರದಂತೆ ಕಾಣುವ ಝರಿಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಕವಿ ಹೃದಯಿ ರಚಿಸಿದ ‘ಸಹಜ ಸುಂದರ ಸೃಷ್ಠಿ ಮಂದಿರ ಋತು ವಿಲಾಸವೋ ಬಂಧುರ…’ ಎಂಬ ಹಾಡು ಇಲ್ಲಿ ನಿಂತಾಗ ನೋಡುಗರ ಕಿವಿಗಳಲ್ಲಿ ಗುಂಯಿಗುಡದೆ ಇರದು.
ಇಂತಹ ಪ್ರಾಕೃತಿಕ ಸೌಂದರ್ಯದ ಮಡಿಲಿಗೆ ಪ್ರತಿನಿತ್ಯ ನೂರಾರು ಚಾರಣಿಗರು, ಪರಿಸರ ಪ್ರೇಮಿಗಳು ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಾದರೆ ಪ್ರವಾಸಿಗರ ಸಂಖ್ಯೆ ಸಾವಿರ ದಾಟುತ್ತದೆ. ಬಿಸ್ಲೆ ಘಾಟ್ ಸಮೀಪದ ಪಟ್ಲ ಬೆಟ್ಟ, ಮಳ್ಳಳ್ಳಿ ಫಾಲ್ಸ್ ಮುಂತಾದ ಸ್ಥಳಗಳಿಗೆ ರಾಜ್ಯದ ಮೂಲೆ ಮೂಲೆಯಿಂದ ಜನ್ರು ಆಗಮಿಸ್ತಾರೆ. ದಿನನಿತ್ಯದ ಜಂಜಡಗಳಿಂದ ವಿಶ್ರಾಂತಿ ಬಯಸುವ ಮನಕ್ಕಂತೂ ಬಿಸ್ಲೆ ಘಾಟ್ ಹೇಳಿಮಾಡಿಸಿದಂತಿದೆ.
-ಹರ್ಷಿತ್ ಪಡ್ರೆ