Saturday, May 10, 2025

ಇಂದು ಕೊನೆಯ ಟಿ20 – ಟೀಮ್ ಇಂಡಿಯಾದಲ್ಲಿ ಬದಲಾವಣೆ?

ಗಯಾನ : ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ ಎರಡೂ ಮ್ಯಾಚ್​ಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇಂದು ಮೂರನೇ ಮ್ಯಾಚ್​ಗೆ ಅಣಿಯಾಗಿದೆ.

ಗಯಾನದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರೋ ಮ್ಯಾಚ್​ನಲ್ಲಿ ವಿರಾಟ್​ ಕೊಹ್ಲಿ ಟೀಮ್ ನಲ್ಲಿ ಒಂದಿಷ್ಟು ಬದಲಾವಣೆಯನ್ನು ಮಾಡುವ ಸಾಧ್ಯತೆ ಹೆಚ್ಚಿದೆ. ಅದ್ಭುತ ಫಾರ್ಮ್​ ನಲ್ಲಿರುವ ಉಪ ನಾಯಕ ರೋಹಿತ್ ಶರ್ಮಾಗೆ ಒಡಿಐ ಮುಂಚಿತವಾಗಿ ರೆಸ್ಟ್ ನೀಡುವ ಸಾಧ್ಯತೆ ಇದೆ. ಅವರ ಬದಲು ಕನ್ನಡಿಗ ಕೆ.ಎಲ್ ರಾಹುಲ್​ಗೆ ಅವಕಾಶ ಕಲ್ಪಿಸಬಹುದು. ವರ್ಲ್ಡ್​ಕಪ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಂದಿದ್ದ ಶಿಖರ್ ಧವನ್​ ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ತಂಡದಿಂದ ಹೊರಗಿಟ್ಟಲ್ಲಿ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲ್ಲ. ಶಿಖರ್ ಧವನ್​ಗೆ ಏಕದಿನ, ಟೆಸ್ಟ್​ ಹಿನ್ನೆಲೆಯಲ್ಲಿ ಫಾರ್ಮ್​ಗೆ ಮರಳ ಬೇಕಾದ ಅನಿವಾರ್ಯತೆಯಲ್ಲಿದ್ದಾರೆ.

ಇನ್ನು ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಮೊದಲ ಆಯ್ಕೆಯ ವಿಕೆಟ್​ ಕೀಪರ್ ಆಗಿ ತಂಡದಲ್ಲಿರುವ ರಿಷಭ್ ಪಂತ್ ನಿರೀಕ್ಷೆಯನ್ನು ಹುಸಿಯಾಗಿಸಿದ್ದಾರೆ. ಸಿಕ್ಕ ಅವಕಾಶವನ್ನು ಪಂತ್ ಬಳಸಿಕೊಂಡಿಲ್ಲ. ಹೀಗಾಗಿ ರಾಹುಲ್​ ತಂಡದಲ್ಲಿದ್ದರೆ ವಿಕೆಟ್​ ಕೀಪಿಂಗ್ ಜವಬ್ದಾರಿಯನ್ನೂ ನಿಭಾಯಿಸಬಲ್ಲವರಾಗಿರುವುದರಿಂದ ಪಂತ್​ ಅವರನ್ನು ಹೊರಗಿಟ್ಟು ಯುವ ಆಟಗಾರ ಶ್ರೇಯಸ್ ಅಯ್ಯರ್​ಗೆ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಪಂತ್​ ಅವರಿಗೆ ಇನ್ನೊಂದು ಅವಕಾಶ ಕೊಡುವುದಾದರೆ ಕನ್ನಡಿಗ ಮನೀಷ್ ಪಾಂಡೆಯನ್ನು ಕೈ ಬಿಟ್ಟರೂ ಅಚ್ಚರಿಯಿಲ್ಲ..!

ಹೀಗೆ ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ ಅಥವಾ ಶಿಖರ್ ಧವನ್ ಇಬ್ಬರಲ್ಲಿ ಒಬ್ಬರನ್ನು ಕೂರಿಸಿ, ಕೆ.ಎಲ್ ರಾಹುಲ್​ ಗೆ, ರಿಷಭ್ ಪಂತ್ ಅಥವಾ ಮನೀಷ್ ಪಾಂಡೆಯನ್ನು ಹೊರಗಿಟ್ಟು ಶ್ರೇಯಸ್​ ಅಯ್ಯರ್​ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಧವನ್ ಮತ್ತು ರೋಹಿತ್ ಇಬ್ಬರನ್ನೂ ಉಳಿಸಿಕೊಂಡು ಮನೀಷ್ ಪಾಂಡೆ ಮತ್ತು ರಿಷಭ್ ಪಂತ್ ಇಬ್ಬರನ್ನೂ ಹೊರಗಿಟ್ಟು ಕೆ.ಎಲ್​ ರಾಹುಲ್​, ಶ್ರೇಯಸ್​ ಅವರನ್ನು ಆಡಿಸುವ ಪ್ರಯೋಗ ಮಾಡಿದರೂ ಮಾಡಬಹುದು.

ಇನ್ನು ಬೌಲಿಂಗ್ ವಿಭಾಗಕ್ಕೆ ಸಂಬಂಧಿಸಿದಂತೆ ಚೊಚ್ಚಲ ಮ್ಯಾಚ್​ನಲ್ಲಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಯುವ ವೇಗಿ ನವದೀಪ್ ಸೈನಿ ಬದಲಿಗೆ ರಾಹುಲ್ ಚಹಾರ್​ಗೆ ಮಣೆ ಹಾಕಬಹುದು. ಮೊದಲ ಮ್ಯಾಚ್​ನಲ್ಲಿ ಮಿಂಚಿದ್ದರೂ ಅಶಿಸ್ತಿನ ನಡುವಳಿಕೆ ತೋರಿ ಒಂದು ಡಿಮೆರೀಟ್ ಅಂಕದ ಶಿಕ್ಷೆಗೆ ಗುರಿಯಾಗಿದ್ದಾರೆ ಸೈನಿ. ಅಷ್ಟೇ ಅಲ್ಲದೆ ಎರಡನೇ ಮ್ಯಾಚ್​ನಲ್ಲಿ 3 ಓವರ್​​​ಗೆ 27ರನ್ ನೀಡಿ ದುಬಾರಿಯಾಗಿದ್ದರು. ಸೈನಿಗೆ ಮತ್ತೊಂದು ಅವಕಾಶ ನೀಡಿದ್ರೆ ಖಲೀಲ್ ಅಹ್ಮದ್​ ಅವರನ್ನು ಬಿಟ್ಟು ರಾಹುಲ್​ ಚಹಾರ್​ಗೆ ಅವಕಾಶ ನೀಡಬಹುದು. ಇಲ್ಲ ಸೈನಿ, ಅಹಮ್ಮದ್ ಇಬ್ಬರ ಬದಲಿಗೆ ರಾಹುಲ್ ಚಹಾರ್, ದೀಪಕ್ ಚಹಾರ್ ಇಬ್ಬರಿಗೂ ಅವಕಾಶ ನೀಡಿದರೂ ಆಶ್ಚರ್ಯವೇನಿಲ್ಲ. ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಬಹಳ ಕಡಿಮೆ. ಒಬ್ಬರೇ ಒಬ್ಬ ಅನುಭವಿ ಬೌಲರ್ ಇಲ್ಲದೆ ಕಣಕ್ಕಿಳಿಯುವ ಸಾಹಸಕ್ಕೆ ಬಹಶಃ ವಿರಾಟ್ ಮುಂದಾಗಲ್ಲ. ಆಲ್​ ರೌಂಡರ್​ ವಿಭಾಗದಲ್ಲಿ ರವೀಂದ್ರ ಜಡೇಜಾ, ಕೃಣಾಲ್ ಪಾಂಡ್ಯ, ವಾಷಿಂಗ್ ಟನ್ ಸುಂದರ್ ಮೂವರೂ ಈ ಮ್ಯಾಚ್​ನಲ್ಲೂ ಆಡುವುದು ಬಹುತೇಕ ಖಚಿತ.
ಭಾರತೀಯ ಕಾಲಮಾದ ಪ್ರಕಾರ ರಾತ್ರಿ 8ಗಂಟೆಗೆ ಪಂದ್ಯ ಆರಂಭವಾಗಲಿದೆ.

RELATED ARTICLES

Related Articles

TRENDING ARTICLES