ಬೆಂಗಳೂರು: ಮೈತ್ರಿ ಪಕ್ಷದ 17 ಮಂದಿ ಶಾಸಕರ ಸಾಮೂಹಿಕ ರಾಜೀನಾಮೆಯಿಂದ ದೋಸ್ತಿ ಸರ್ಕಾರ ಆತಂಕದಲ್ಲಿದ್ದು, ಅತೃಪ್ತ ಶಾಸಕರನ್ನು ಮನವೊಲಿಸಲು ದೋಸ್ತಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಅದ್ರಲ್ಲೂ ಡಿಕೆ ಶಿವಕುಮಾರ್ ಸರ್ಕಾರ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಮನವೊಲಿಕೆಗೆ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದ್ರು. ನಂತರ ಸಂಜೆಯವರೆಗೂ ಸಿಎಂ ಕುಮಾರಸ್ವಾಮಿ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಎಂಟಿಬಿ ಮನವೊಲಿಸಲು ಕಸರತ್ತು ಮಾಡಿದ್ರು. ಈ ಸಂಧಾನ ಯಶಸ್ವಿ ಕೂಡ ಆಗಿತ್ತು. ನಿನ್ನೆಯಷ್ಟೇ ನಾನು ಕಾಂಗ್ರೆಸ್ನಲ್ಲೇ ಇರುತ್ತೇನೆ ಅಂತ ಹೇಳಿಕೆ ನೀಡಿದ್ದ ಎಂಟಿಬಿ ನಾಗರಾಜ್ ಇದೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ,.
ಮಾಧ್ಯಮದವರೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಒಂದು ವೇಳೆ ಸುಧಾಕರ್ ರಾಜೀನಾಮೆ ಹಿಂಪಡೆಯದಿದ್ರೆ ನಾನೂ ಪಡೆಯಲ್ಲ, ನಾನು ಸುಧಾಕರ್ಗೆ ಎಲ್ಲಾ ವಿಚಾರ ತಿಳಿಸಿ ಮನವೊಲಿಸಲು ಪ್ರಯತ್ನ ಮಾಡ್ತೇನೆ, ನಾನು ಒಬ್ಬನೇ ಇಲ್ಲಿ ಇದ್ದು ಎನು ಮಾಡ್ಲಿ ಎಂದು ಹೇಳಿದ್ದು, ಅವರ ಹೇಳಿಕೆಯಿಂದ ದೋಸ್ತಿಯಲ್ಲಿ ಮತ್ತೆ ಆತಂಕ ಶುರುವಾಗಿದೆ.