Sunday, May 12, 2024

ರನ್ನಿಂಗ್​ ರೇಸ್​​ನಲ್ಲಿ ಬಂದ ಶಾಸಕರು- ವಿಚಾರಣೆ ಬಳಿಕ ಸ್ಪೀಕರ್ ಹೇಳಿದ್ದೇನು?

ಬೆಂಗಳೂರು : ರಾಜ್ಯ ರಾಜಕಾರಣ ಇಡೀ ದೇಶದ ಗಮನ ಸೆಳೆಯುತ್ತಿದೆ. ಕ್ಷಣಕ್ಕೊಂದು ಕುತೂಹಲಕಾರಿ ಬೆಳವಣಿಗೆಳು ನಡೆಯುತ್ತಿವೆ. ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ವಿಳಂಬ ಧೋರಣೆ ತೋರುತ್ತಿದ್ದಾರೆ ಅಂತ ಅತೃಪ್ತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಶಾಸಕರ ರಾಜೀನಾಮೆಗೆ ಸಂಬಂಧಿಸಿದಂತೆ ಇಂದೇ ನಿರ್ಧಾರ ತೆಗೆದುಕೊಳ್ಳಬೇಕು ಅಂತಾ ಸುಪ್ರೀಂಕೋರ್ಟ್ ಸೂಚಿಸಿತ್ತು. ಸುಪ್ರೀಂ ಆದೇಶಕ್ಕೆ ಸಂಬಂಧಿಸಿದಂತೆ ಸ್ಪೀಕರ್ ರಮೇಶ್ ಕುಮಾರ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಂಜೆ 6 ಗಂಟೆಯೊಳಗೆ ರಾಜೀನಾಮೆ ಅರ್ಜಿಗಳನ್ನು ಇತ್ಯರ್ಥ ಮಾಡಲು ಸಾಧ್ಯವಿಲ್ಲ ಅಂತ ರಮೇಶ್ ಕುಮಾರ್ ಸುಪ್ರೀಂಗೆ ರಿಟ್ ಅರ್ಜಿಯನ್ನು ಸಲ್ಲಿಸಿದ್ರು. ಹಾಗೆಯೇ ಮಧ್ಯಾಹ್ನದೊಳಗೆ ತನ್ನ ಅರ್ಜಿಯನ್ನು ಇತ್ಯರ್ಥ ಮಾಡ್ಬೇಕು ಅಂತಾ ಮನವಿ ಮಾಡಿದ್ರು. ರಮೇಶ್ ಕುಮಾರ್ ಅವರ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂಕೋರ್ಟ್, ನಾಳೆ ವಿಚಾರಣೆ ನಡೆಸೋದಾಗಿ ಹೇಳಿತು.

ಈ ಹಿನ್ನೆಲೆಯಲ್ಲಿ ಸ್ಪೀಕರ್ ಇಂದೇ ಶಾಸಕರ ರಾಜೀನಾಮೆ ವಿಷಯವನ್ನು ಕೈಗೆತ್ತಿಕೊಳ್ಳಬೇಕಿತ್ತು. ಹಾಗೆಯೇ ಸುಪ್ರೀಂ ಸೂಚನೆಯಂತೆ ಅತೃಪ್ತರು ಇಂದು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಮುಂದೆ ಹಾಜರಾಗಬೇಕಿತ್ತು. ಮುಂಬೈನಿಂದ ತರಾತುರಿಯಲ್ಲಿ ಹೊರಟು ಬಂದ 11 ಮಂದಿ ಅತೃಪ್ತರು 2-3 ನಿಮಿಷ ತಡವಾಗಿ ಓಡೋಡುತ್ತಾ ಸ್ಪೀಕರ್ ಕಚೇರಿಗೆ ಬಂದ್ರು.
ಹೆಚ್ಎಎಲ್​ ವಿಮಾನ ನಿಲ್ದಾಣದಿಂದ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ ಅವರುಗಳನ್ನು ಸ್ಪೀಕರ್​ ಕಚೇರಿಗೆ ಕರೆದುಕೊಂಡು ಬರಲಾಯಿತು. ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಅತೃಪ್ತರು ರನ್ನಿಂಗ್ ರೇಸ್​ನಲ್ಲಿ ಸ್ಪೀಕರ್ ಕಚೇರಿಗೆ ಓಡಿ ಬಂದ್ರು. ಭೈರತಿ ಬಸವರಾಜ್‌, ರಮೇಶ್‌ ಜಾರಕಿಹೊಳಿ, ಮುನಿರತ್ನ, ಎಸ್‌.ಟಿ. ಸೋಮಶೇಖರ್‌, ಪ್ರತಾಪಗೌಡ ಪಾಟೀಲ್, ಶಿವರಾಮ್‌ ಹೆಬ್ಬಾರ್‌, ಬಿಸಿ ಪಾಟೀಲ್‌, ಗೋಪಾಲಯ್ಯ, ನಾರಾಯಣ ಗೌಡ, ವಿಶ್ವನಾಥ್‌, ಮಹೇಶ್‌ ಕುಮಟಳ್ಳಿ ಸ್ಪೀಕರ್‌ ಭೇಟಿ ಮಾಡಿದರು. ಇವರೆಲ್ಲಾ ಕೈ ಬರಹದಲ್ಲೇ ರಾಜೀನಾಮೆ ಪತ್ರ ಬರೆದು ಮತ್ತೊಮ್ಮೆ ಸ್ಪೀಕರ್​ಗೆ ಸಲ್ಲಿಸಿದರು. ಹೆಚ್ಚು ಕಮ್ಮಿ ಅರ್ಧಗಂಟೆ ಕಾಲ ಸ್ಪೀಕರ್ ಅತೃಪ್ತರ ವಿಚಾರಣೆ ನಡೆಸಿದ್ರು.
ಅತೃಪ್ತರ ವಿಚಾರಣೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸ್ಪೀಕರ್, ”ನಾನು ವಿಳಂಬ ಧೋರಣೆ ಅನುಸರಿಸುತ್ತಿದ್ದೀನಿ ಅಂತ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಇದ್ರಿಂದ ನನಗೆ ಬೇಸರವಾಗಿದೆ” ಅಂತ ಅಸಮಧಾನ ಹೊರಹಾಕಿದ್ರು.
ನಾನು ಕಾನೂನು ರೀತ್ಯ, ಸಂವಿಧಾನದ ನಿಯಮಾವಳಿಗಳ ಪ್ರಕ್ರಿಯೆಯನ್ನ ಅನುಸರಿಸುತ್ತಿದ್ದೇನೆ . ಸಂವಿಧಾನದ ಆಶಯಗಳಂತೆ ನಿಯಮಾವಳಿ ಪ್ರಕಾರವೇ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ ಅಂತ ಹೇಳಿದ್ರು. ಇದರೊಂದಿಗೆ ಇನ್ನೂ ಕೂಡ ಅತೃಪ್ತರ ರಾಜೀನಾಮೆ ಅಂಗೀಕಾರವಾಗಿಲ್ಲ ಅಂತಾ ಸ್ಪಷ್ಟಪಡಿಸಿದ್ರು.

RELATED ARTICLES

Related Articles

TRENDING ARTICLES