ವಿಶ್ವಕಪ್ ಸಮರದ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ರೋಚಕ ಜಯ ಸಾಧಿಸಿತು. ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ಹರಿಣಗಳ ಮೇಲೆ ಸವಾರಿ ಮಾಡಿದ ಬಾಂಗ್ಲಾ ಟೈಗರ್ಸ್ಗಳು 21 ರನ್‌ಗಳ ಗೆಲುವಿನ ಕೇಕೆ ಹಾಕಿದ್ರು.
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ತನ್ನ ಗರಿಷ್ಠ ರನ್ (330) ಪೇರಿಸಿತು. ಶಕೀಬ್ ಅಲ್ ಹಸನ್, ಮುಷ್ಫಿಕರ್ ರಹೀಮ್ ಆಕರ್ಷಕ ಶತಕದ ಜತೆಯಾಟ ಹಾಗೂ ಮೊಹಮ್ಮದುಲ್ಲಾ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಬೃಹತ್ ಮೊತ್ತ ಕಲೆಹಾಕಿತು.
ಬಾಂಗ್ಲಾದೇಶ ಪರ ಇನ್ನಿಂಗ್ಸ್ ಆರಂಭಿಸಿದ ತಮೀಮ್ ಇಕ್ಬಾಲ್, ಸೌಮ್ಯ ಸರ್ಕಾರ್ ಮೊದಲ ವಿಕೆಟ್‌ಗೆ 60 ರನ್‌ಗಳ ಉತ್ತಮ ಆರಂಭ ಒದಗಿಸಿದ್ರು. ಆದ್ರೆ 16 ರನ್ ಗಳಿಸಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸುತ್ತಾ ಇದ್ದ ತಮೀಮ್, ಪೆಹ್ಲುಕ್ವಾಯೂ ಎಸೆತದಲ್ಲಿ ನಿರ್ಗಮಿಸಿದ್ರೆ, ಸೌಮ್ಯಾ ಸರ್ಕಾರ್ ಆಟ 42 ರನ್ಗಳಿಗೆ ಅಂತ್ಯವಾಯ್ತು.
ಬಳಿಕ 3ನೇ ವಿಕೆಟ್‌ಗೆ ಜೊತೆಯಾದ ಮುಶ್ಪಿಕರ್ ರಹೀಮ್ ಹಾಗೂ ಶಕೀಬ್ ಆಲ್ ಹಸನ್ 142 ರನ್‌ಗಳ ಭರ್ಜರಿ ಜೊತೆಯಾಟವಾಡಿದ್ರು. ಇನ್ ಫ್ಯಾಕ್ಟ್ ಇದು ಬಾಂಗ್ಲಾದೇಶ ಪರ ಏಕದಿನ ವಿಶ್ವಕಪ್ನಲ್ಲಿ ಯಾವುದೇ ವಿಕೆಟ್‌ಗೆ ದಾಖಲಾದ ಅತ್ಯಧಿಕ ರನ್‌ಗಳ ಜೊತೆಯಾಟವಾಯ್ತು.
ನಂತರ ಕಣಕ್ಕಿಳಿದ ಬ್ಯಾಟ್ಸ್ಮನ್ಗಳು ಉಪಯುಕ್ತ ರನ್ ಕೆಲೆ ಹಾಕುವಲ್ಲಿ ವಿಫಲರಾದ್ರು. ಆದರೂ ಅಂತಿಮ ಹಂತದಲ್ಲಿ ಮೊಹಮದುಲ್ಲಾ ಹಾಗೂ ಮೊಸಾದಿಕ್ ಹುಸೈನ್ರ 66 ರನ್‌ಗಳ ಜೊತೆಯಾಟದಿಂದ ಬಾಂಗ್ಲಾ ಪಡೆ ಬೃಹತ್ ಮೊತ್ತ ಕಲೆಹಾಕಿತು. ಸಂಘಟಿತ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗಧಿತ ಓವರ್‌ಗಳಲ್ಲಿ 330 ರನ್ ಕಲೆಹಾಕಿದ ಬಾಂಗ್ಲಾ ಹುಲಿಗಳು, ಹರಿಣಗಳ ಗೆಲುವುಗೆ 331 ರನ್‌ಗಳ ಗುರಿ ನೀಡಿದ್ರು.
ಬೃಹತ್ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೆ ಕ್ವಿಂಟನ್ ಡಿ ಕಾಕ್ ಹಾಗೂ ಏಡೆನ್ ಮರ್ಕರಮ್ ಎಚ್ಚರಿಕೆಯ ಆರಂಭವೊದಗಿಸಿದರು. ಆದರೆ ಇಬ್ಬರ ನಡುವೆ ಉಂಟಾದ ಹೊಂದಿಕೆಯ ಕೊರತೆಯಿಂದಾಗಿ ಡಿ ಕಾಕ್ ರನೌಟ್ ಬಲೆಗೆ ಬಿದ್ರು. ಇದರ ಬೆನ್ನಲ್ಲೇ 45 ರನ್ಗಳೊಂದಿಗೆ ಅರ್ಧಶತಕ ಸನಿಹವಿದ್ದ ಮರ್ಕರಮ್ ಶಕಿಬ್ ಆಲ್ ಹಸನ್ಗೆ ವಿಕೆಟ್ ಒಪ್ಪಿಸಿದ್ರು.
ಇನ್ನೊಂದೆಡೆ ನಾಯಕನ ಇನ್ನಿಂಗ್ಸ್ ಕಟ್ಟಿದ ಫಾಫ್ ಡು ಪ್ಲೆಸಿಸ್ ದಿಟ್ಟ ಪ್ರತಿ ಹೋರಾಟವನ್ನು ನೀಡಿದರು. 45 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ ಡು ಪ್ಲೆಸಿಸ್ ಫಿಪ್ಟಿ ಬೆನ್ನಲ್ಲೇ ದೊಡ್ಡ ಹೊಡೆತಕ್ಕೆ ಮುಂದಾಗಿ ಮೆಹದಿ ಹಸನ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದ್ರು. ಬಳಿಕ ಜತೆಗೂಡಿದ ಡೇವಿಡ್ ಮಿಲ್ಲರ್ ಹಾಗೂ ರಾಸೀ ವ್ಯಾನ್ ಡೆರ್ ದುಸಾನ್ ಹರಿಣಗಳ ಚೇಸಿಂಗ್‌ಗೆ ಮತ್ತಷ್ಟು ವೇಗವನ್ನು ತುಂಬಿದರು. ಪರಿಣಾಮ 34.2 ಓವರ್‌ಗಳಲ್ಲಿ ತಂಡದ ಮೊತ್ತ 200ರ ಗಡಿ ದಾಟಿತು.
ಆದರೆ ಮತ್ತೆ ಹರಿಣಗಳನ್ನು ಕಾಡಿದ ಮುಸ್ತಾಫಿಜುರ್ ರಹ್ಮಾನ್, ಮಿಲ್ಲರ್‌ಗೆ ಪೆವಿಲಿಯನ್ ದಾರಿ ತೋರಿಸಿದ್ರು. ದುಸಾನ್ ಕೂಡಾ ಇದರಿಂದ ಹೊರತಾಗಿರಲಿಲ್ಲ. ಬಳಿಕ ಕಣಕ್ಕಿಳಿದ ಆ್ಯಂಡಿಲ್ ಪೆಹ್ಲುಕಾಯೊ ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಡಿಆರ್ಎಸ್ ಬೆಂಬಲ ಪಡೆದ ಜೆ ಪಿ ಡುಮಿನಿ ಹೋರಾಟವೂ 45 ರನ್ಗಳಿಗೆ ಅಂತ್ಯವಾಯ್ತು.
ದೊಡ್ಡ ಜೊತೆಯಾಟದ ಕೊರತೆ ಅನುಭವಿಸಿದ ಸೌತ್ ಆಫ್ರಿಕಾ ಅಂತಿಮವಾಗಿ 8 ವಿಕೆಟ್ ನಷ್ಟಕ್ಕೆ 309 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ ಪಂದ್ಯದಲ್ಲಿ 21 ರನ್‌ಗಳ ಸೋಲಿಗೆ ಶರಣಾಯ್ತು. 2007ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಬಾಂಗ್ಲಾ ವಿರುದ್ಧ ಸೋಲುಂಡಿದ್ದ ಸೌತ್ ಆಫ್ರಿಕಾ ಇದೀಗ ಮತ್ತೆ ಮುಖಭಂಗ ಅನುಭವಿಸಿತು.