ತುಮಕೂರು : ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ ಅಂತ ತುಮಕೂರಿನಲ್ಲಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ಗಳನ್ನು ಅಂಟಿಸಿದ್ದು, ಪರಂ ಫುಲ್ ಗರಂ ಆಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆಬೀರಿದೆ. ಕಾಂಗ್ರೆಸ್ ಕೇವಲ ಬೆಂಗಳೂರು ಗ್ರಾಮಾಂತರದಲ್ಲಿ (ಡಿ.ಕೆ ಸುರೇಶ್) ಗೆದ್ದಿದ್ದರೆ, ಜೆಡಿಎಸ್ ಹಾಸನದಲ್ಲಿ (ಪ್ರಜ್ವಲ್ ರೇವಣ್ಣ) ಮಾತ್ರ ಜಯಭೇರಿ ಬಾರಿಸಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸಮಲತಾ ಅಂಬರೀಶ್ ಅವರಿಗೆ ವಿಜಯ ಲಕ್ಷ್ಮಿ ಒಲಿದಿದ್ದಾಳೆ.
ಇನ್ನು ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ದೇವೇಗೌಡರು ಬಿಜೆಪಿಯ ಜಿ.ಎಸ್ ಬಸವರಾಜ್ ಅವರ ವಿರುದ್ಧ ಸೋಲನುಭವಿಸಿದ್ದಾರೆ. ಕಾಂಗ್ರೆಸ್ನ ಸಂಸದರಿಗೇ ಟಿಕೆಟ್ ನೀಡದೆ ಮೈತ್ರಿ ಧರ್ಮದ ಹೆಸರಲ್ಲಿ ದೇವೇಗೌಡರಿಗೆ ಟಿಕೆಟ್ ನೀಡಿದ್ದು, ಸ್ಥಳೀಯ ‘ಕೈ’ ನಾಯಕರಿಗೆ ಮಾತ್ರವಲ್ಲದೆ ಅನೇಕ ಕಾರ್ಯಕರ್ತರಿಗೆ ಅಸಮಾಧಾನ ತಂದಿತ್ತು.
ಇದೀಗ ಮೈತ್ರಿ ಅಭ್ಯರ್ಥಿ ದೇವೇಗೌಡರು ಸೋಲನುಭವಿಸಿದ ಹಿನ್ನೆಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ದೇವೇಗೌಡರನ್ನು ತುಮಕೂರಿಗೆ ಕರೆತಂದಿದ್ದಕ್ಕೆ ‘ಕೈ’ಯ ಕೆಲವು ನೊಂದ ಕಾರ್ಯಕರ್ತರು ಪರಮೇಶ್ವರ್ ಅವರ ವಿರುದ್ಧ ಪೋಸ್ಟರ್ಗಳನ್ನು ಅಂಟಿಸೋ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ ರಾತ್ರಿಯಿಂದ ತುಮಕೂರಿನಲ್ಲಿ ‘ಪರಮೇಶ್ವರ್ ಹಠಾವೋ, ಕಾಂಗ್ರೆಸ್ ಬಚಾವೋ’ ಅನ್ನೋ ಪೋಸ್ಟರ್ ರಾರಾಜಿಸುತ್ತಿದ್ದು, ಪರಂ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಿಲ್ಲಾ ಕಾಂಗ್ರೆಸ್ ವಿರುದ್ಧ ಪರಮೇಶ್ವರ್ ಕೆಂಡಾಮಂಡಲರಾಗಿದ್ದು, ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಂದ ಆ ಪೋಸ್ಟರ್ಗಳನ್ನು ತೆಗೆಸಿ ಡಿಸಿಎಂಗೆ ಆದ ಮುಜುಗರವನ್ನು ತಪ್ಪಿಸಲು ಮುಂದಾಗಿದೆ.
ಬಿತ್ತಿಪತ್ರ ಅಂಟಿಸಿದವರ ವಿರುದ್ಧ ಕಾಂಗ್ರೆಸ್ ಕ್ರಮಗಳೊಳ್ಳಲು ಮುಂದಾಗಿದ್ದು, ಕಿಡಿಗೇಡಿಗಳ ಕೃತ್ಯಕ್ಕೆ ಪೊಲೀಸರಿಗೆ ದೂರು ನೀಡೋ ಸಾಧ್ಯತೆ ಕೂಡ ಇದೆ.
ಪರಂ ವಿರುದ್ಧ ಕಾರ್ಯಕರ್ತರು ಗರಂ..!
TRENDING ARTICLES