ನವದೆಹಲಿ: 17ನೇ ಲೋಕಸಭಾ ಚುನಾವಣೆ 7 ಹಂತಗಳಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. 543 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಹುತೇಕ ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ. ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿದ್ದು ಈ 7 ಹಂತಗಳಲ್ಲಿಯೂ ಹಿಂಸಾಚಾರ ನಡೆದಿದ್ದು, ಆತಂಕಕ್ಕೆ ಕಾರಣವಾಗಿದೆ.
2014 ಲೋಕಸಭಾ ಚುನಾವಣೆಯ ಸಮೀಕ್ಷೆಯಲ್ಲಿ ಹೆಚ್ಚಿನ ಮಾಧ್ಯಮಗಳು ಎನ್ಡಿಎಗೆ ಬಹುಮತ ಎಂದು ಘೋಷಿಸಿದ್ದವು. ಟುಡೇಸ್ ಚಾಣಕ್ಯ ಅತ್ಯಂತ ನಿಖರ ಅಂಕಿ ಅಂಶಗಳನ್ನು ನೀಡಿತ್ತು. 2019ರ ಚುನಾವಣೆ ಮುಗಿಯುತ್ತಿದ್ದಂತೆ ವಿವಿಧ ಮಾಧ್ಯಮ ಸಂಸ್ಥೆಗಳು ಮತ್ತೆ ಸಮೀಕ್ಷೆ ಪ್ರಕಟಿಸಿವೆ. ಟುಡೇಸ್ ಚಾಣಕ್ಯ, ಟೈಮ್ಸ್ ನೌ, ಜನ್ ಕೀ ಬಾತ್, ಇಂಡಿಯಾ ಟುಡೇ, ಎನ್ಡಿಟಿವಿ, ರಿಪಬ್ಲಿಕ್, ಸಿ ವೋಟರ್, ಲೋಕ್ ಮತ್, ಇಂಡಿಯಾ ಟಿವಿ ಮೊದಲಾದವು ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿವೆ. ಈ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆ ಹೀಗಿದೆ.
ಸೀ-ವೋಟರ್: ಸಿ ವೋಟರ್ ಎಕ್ಸಿಟ್ ಪೋಲ್ ಪ್ರಕಟವಾಗಿದ್ದು, 287 ಸ್ಥಾನ ಗಳಿಸಿ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಅಂತಾ ತಿಳಿಸಿದೆ. ಕರ್ನಾಟಕದಲ್ಲಿ ಬಿಜೆಪಿಗೆ 18, ಕಾಂಗ್ರೆಸ್ 7, ಜೆಡಿಎಸ್ 2, ಇತರೆ 1 ಸ್ಥಾನ ಸಿಗಲಿದೆ. ಸಿ ವೋಟರ್ ಪ್ರಕಾರ ಯುಪಿಯಲ್ಲಿ ಬಿಜೆಪಿಗೆ 38 ಸ್ಥಾನ ಹಾಗೂ ಮಹಾಮೈತ್ರಿಗೆ 40 ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕೇವಲ 2 ಸ್ಥಾನ ಲಭಿಸಲಿದೆ.
ಚಾಣಕ್ಯ ಸಮೀಕ್ಷೆ: ಚಾಣಕ್ಯ ಸಮೀಕ್ಷೆಯ ಪ್ರಕಾರ ಗುಜರಾತ್ ರಾಜ್ಯದ ಎಲ್ಲಾ 26 ಸ್ಥಾನಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ. ಹರ್ಯಾಣ ರಾಜ್ಯದ ಎಲ್ಲಾ 10 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದ್ದು, ದೆಹಲಿಯ ಎಲ್ಲಾ 7 ಕ್ಷೇತ್ರಗಳಲ್ಲೂ ಕಮಲ ಅರಳುತ್ತೆ. ಇನ್ನು ಛತ್ತೀಸ್ಗಢದ 11 ಕ್ಷೇತ್ರಗಳಲ್ಲಿ ಬಿಜೆಪಿ 9, ಕಾಂಗ್ರೆಸ್ಗೆ 2, ಕೇರಳದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ + 16, ಎಲ್ಡಿಎಫ್ 4 ಸ್ಥಾನ ಗಳಿಸಲಿದೆ ಅಂತ ಸಮೀಕ್ಷೆ ತಿಳಿಸಿದೆ. ಮಧ್ಯಪ್ರದೇಶದ 29 ಕ್ಷೇತ್ರಗಳಲ್ಲಿ ಬಿಜೆಪಿಗೆ 27, ಕಾಂಗ್ರೆಸ್ಗೆ 2 ಸ್ಥಾನ ಲಭಿಸಲಿದ್ದು, ತಮಿಳುನಾಡಿನ ಡಿಎಂಕೆ + 31, ಎಐಎಡಿಎಂಕೆ + 7 ಸ್ಥಾನ ಗಳಿಸಲಿವೆ. ಉತ್ತರಾಖಂಡ ರಾಜ್ಯದ ಎಲ್ಲಾ 5 ಕ್ಷೇತ್ರಗಳಲ್ಲೂ ಬಿಜೆಪಿಗೆ ಜಯ ಲಭಿಸಲಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಬಿಜೆಪಿ 23, ಮೈತ್ರಿಗೆ 5 ಸ್ಥಾನ ಲಭಿಸಲಿದೆ ಎಂದಿದೆ ಸಮೀಕ್ಷೆ.
ಟೈಮ್ಸ್ ನೌ: ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಎನ್ಡಿಎಗೆ 306 ಕ್ಷೇತ್ರಗಳು ಲಭಿಸಲಿದ್ದು, ಯುಪಿಎ ಮಿತ್ರಪಕ್ಷಗಳಿಗೆ 132 ಸ್ಥಾನಗಳು ಹಾಗೂ ಇತರೆ ಪಕ್ಷಗಳು 104 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ. ಇದೇ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21, ಕಾಂಗ್ರೆಸ್ ಪಕ್ಷ 7 ಸ್ಥಾನಗಳಲ್ಲಿ ಜಯಭೇರಿ ಸಾಧ್ಯತೆ ಇದೆ. ವಿವಿಧ ಸಂಸ್ಥೆಗಳ ಸಮೀಕ್ಷೆ ಪ್ರಕಾರ ಯುಪಿ ಫಲಿತಾಂಶ ಕುತೂಹಲ ಮೂಡಿಸಿದೆ. ಟೈಮ್ಸ್ ನೌ ಪ್ರಕಾರ ಅತೀ ಹೆಚ್ಚು ಅಂದರೆ 80 ಸ್ಥಾನ ಹೊಂದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ 58, ಕಾಂಗ್ರೆಸ್ 2, ಮಹಾಮೈತ್ರಿಗೆ 20 ಸ್ಥಾನ ಲಭಿಸಲಿವೆ.
ಇಂಡಿಯಾ ಟುಡೆ: ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21-25 ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಕೇವಲ 3 ರಿಂದ 6 ಸ್ಥಾನಗಳಲ್ಲಿ ಗೆಲುವು ಸಿಗಲಿದೆ. ಜೆಡಿಎಸ್ ಪಕ್ಷ ಎಲ್ಲಾ ಕ್ಷೇತ್ರಗಳಲ್ಲೂ ಸೋಲುವ ಸಾಧ್ಯತೆ ಇದೆ ಹಾಗೂ 1 ಕ್ಷೇತ್ರದಲ್ಲಿ ಇತರರು ಗೆಲ್ಲುವ ಸಾಧ್ಯತೆ ಇದೆ ಅಂತ ಸಮೀಕ್ಷೆ ತಿಳಿಸಿದೆ.
ಎಬಿಪಿ: ಎಬಿಪಿ ಸಮೀಕ್ಷೆಯ ಪ್ರಕಾರ ಎನ್ಡಿಎಗೆ 336 ಕ್ಷೇತ್ರಗಳಲ್ಲಿ ಜಯ ಸಿಗಲಿದ್ದು, ಯುಪಿಎ ಕೇವಲ 55 ಕ್ಷೇತ್ರಗಳಲ್ಲಿ ಜಯಭೇರಿ ಸಾಧ್ಯತೆ ಇದೆ. ಇತರೆ ಪಕ್ಷಗಳಿಗೆ 148 ಕ್ಷೇತ್ರಗಳು ದಕ್ಕುವ ಸಾಧ್ಯತೆ ಇದೆ ಅಂತ ಸಮೀಕ್ಷೆ ತಿಳಿಸುತ್ತದೆ.
ಎನ್ಡಿ ಟಿವಿ: ಎನ್ಡಿ ಟಿವಿ ಸಮೀಕ್ಷೆಯ ಪ್ರಕಾರ ಎನ್ಡಿಎಗೆ 306 ಸ್ಥಾನ ಹಾಗೂ ಯುಪಿಎ ಮಿತ್ರ ಪಕ್ಷಗಳಿಗೆ 142 ಸ್ಥಾನಗಳು ದಕ್ಕುವ ಸಾಧ್ಯತೆ ಇದೆ. ಇತರೆ ಪಕ್ಷಗಳು 94 ಕ್ಷೇತ್ರಗಳಲ್ಲಿ ಜಯಭೇರಿ ಸಾಧ್ಯತೆ ಇದೆ. ಎನ್ಡಿ ಟಿವಿ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 19 ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಪಕ್ಷಗಳಿಗೆ 7 ಸ್ಥಾನಗಳು ಹಾಗೂ ಇತರೆ ಪಕ್ಷಗಳು 2 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ.
ನ್ಯೂಸ್ 24: ನ್ಯೂಸ್ 24 ಚಾಣಕ್ಯ ಪ್ರಕಾರ ಎನ್ಡಿಎಗೆ 340 ಸ್ಥಾನ ಲಭಿಸಲಿದ್ದು, ಯುಪಿಎ ಮಿತ್ರ ಪಕ್ಷಗಳಿಗೆ 70 ಸ್ಥಾನಗಳು, ಇತರೆ ಪಕ್ಷಗಳಿಗೆ 133 ಸ್ಥಾನಗಳಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ ಅಂತ ತಿಳಿದುಬಂದಿದೆ.
ಜನ್ ಕಿ ಬಾತ್: ಜನ್ ಕಿ ಬಾತ್ ಸಮೀಕ್ಷೆಯ ಪ್ರಕಾರ ಎನ್ಡಿಎಗೆ 305 ಸ್ಥಾನ ಲಭಿಸಲಿದ್ದು, ಯುಪಿಎ ಮಿತ್ರ ಪಕ್ಷಗಳು 124 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿವೆ. ಇತರೆ ಮಿತ್ರ ಪಕ್ಷಗಳಿಗೆ 113 ಕ್ಷೇತ್ರಗಳಲ್ಲಿ ಗೆಲುವು ಲಭಿಸಲಿದೆ.
ಮಂಡ್ಯ ಲೋಕಸಮರದ ಬಗ್ಗೆ ಸಮೀಕ್ಷೆ ಏನು ಹೇಳುತ್ತೆ..?
ಲೋಕಸಭಾ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗಿದ್ದು, ಮಂಡ್ಯ ಕ್ಷೇತ್ರದಲ್ಲಿ ಬಹುತೇಕ ಎಲ್ಲಾ ಸಮೀಕ್ಷೆಗಳು ಸುಮಲತಾ ಪರ ಬಂದಿವೆ. ಸಮೀಕ್ಷೆಗಳ ಪ್ರಕಾರ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಸುಮಲತಾ ಅಂಬರೀಶ್ಗೆ ಜಯ ಲಭಿಸಲಿದೆ. ಇಂಡಿಯಾ ಟುಡೇ, ಟೈಮ್ಸ್ ನೌ, ರಿಪಬ್ಲಿಕ್ ಟಿವಿಯಲ್ಲೂ ಅದೇ ಭವಿಷ್ಯ ವ್ಯಕ್ತವಾಗಿದೆ. ಸರ್ವೇಗಳು ಸುಮಲತಾ ಜಯಭೇರಿಯ ಭವಿಷ್ಯ ನುಡಿದಿದ್ದು, ಟುಡೇಸ್ ಚಾಣಕ್ಯ ಸರ್ವೇಯಲ್ಲೂ ಸುಮಲತಾಗೆ ಗೆಲುವು ಅಂತ ಬಂದಿದೆ. ಸಿ-ವೋಟರ್ ಸಮೀಕ್ಷೆಯಲ್ಲೂ ಸುಮಲತಾ ಜಯಭೇರಿ ಬಾರಿಸಿದ್ದಾರೆ.
ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಯಾರಿಗೆ ಪ್ರಾಬಲ್ಯ..?
ವಿವಿಧ ಸಂಸ್ಥೆಗಳ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲಿದೆ. ಟೈಮ್ಸ್ ನೌ ಸಮೀಕ್ಷೆ ಪ್ರಕಾರ ಬಿಜೆಪಿ 21, ಕಾಂಗ್ರೆಸ್ 7 ಸ್ಥಾನ ಪಡೆಯಲಿದೆ. ಮೈ ಎಕ್ಸಿಸ್ ಸಮೀಕ್ಷೆ ಪ್ರಕಾರ ಬಿಜೆಪಿ 23, ಕಾಂಗ್ರೆಸ್ 4, ಇತರೆ 1 ಸ್ಥಾನ ಪಡೆಯಲಿದೆ. ನ್ಯೂಸ್ ನೇಷನ್ ಸಮೀಕ್ಷೆಯ ಪ್ರಕಾರ ಬಿಜೆಪಿ 18, ಕಾಂಗ್ರೆಸ್ 10 ಸ್ಥಾನ ಪಡೆಯಲಿದೆ. ಪೋಲ್ಸ್ ಆಫ್ ಪೋಲ್ಸ್ ಸಮೀಕ್ಷೆ ಪ್ರಕಾರ ಬಿಜೆಪಿ 21, ಕಾಂಗ್ರೆಸ್ 7 ಸ್ಥಾನ ಪಡೆಯಲಿದೆ.
ಅತೀ ಹೆಚ್ಚು ಸ್ಥಾನ(80) ಹೊಂದಿರುವ ಉತ್ತರ ಪ್ರದೇಶದಲ್ಲಿ ಯಾರಿಗೆ ಬಹುಮತ..?
ಟೈಮ್ಸ್ ನೌ ಪ್ರಕಾರ ಬಿಜೆಪಿ 58, ಕಾಂಗ್ರೆಸ್ 2, ಮಹಾಮೈತ್ರಿ 20 ಸ್ಥಾನ ಲಭಿಸಲಿದೆ. ನೀಲ್ಸನ್ ಪ್ರಕಾರ ಬಿಜೆಪಿ 22, ಕಾಂಗ್ರೆಸ್ 2, ಮಹಾಮೈತ್ರಿ 56 ಸ್ಥಾನ ಲಭಿಸಲಿದ್ದು, ಸಿ ವೋಟರ್ ಪ್ರಕಾರ ಬಿಜೆಪಿ 38, ಕಾಂಗ್ರೆಸ್ 2, ಮಹಾಮೈತ್ರಿ 40 ಸ್ಥಾನ ಲಭಿಸಲಿದೆ. ಜನ್ ಕಿ ಬಾತ್ ಪ್ರಕಾರ ಬಿಜೆಪಿ 53, ಕಾಂಗ್ರೆಸ್ 3, ಮಹಾಮೈತ್ರಿ 24 ಸ್ಥಾನ ಗೆಲ್ಲಲಿವೆ. ಪೋಲ್ ಆಫ್ ಪೋಲ್ ಪ್ರಕಾರ ಬಿಜೆಪಿ 43, ಕಾಂಗ್ರೆಸ್ 2, ಮಹಾಮೈತ್ರಿ 35 ಸ್ಥಾನ ಗೆಲ್ಲಲಿವೆ.
ಏನಿದು ಎಕ್ಸಿಟ್ ಪೋಲ್: ಸಿಎಸ್ಡಿಎಸ್ ಅನ್ನೋ ಸಂಸ್ಥೆ ಮೂಲಕ 1960ರ ದಶಕದಲ್ಲಿ ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆ ಆರಂಭವಾಗಿತ್ತು. 1998ರ ತನಕವೂ ಮಾಧ್ಯಮ ಕ್ಷೇತ್ರದಲ್ಲಿ ಗಂಭೀರ ಅನ್ನುವಂತಹ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿರಲಿಲ್ಲ. 1999 – 2004, 2009 – 2014ರ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ಪ್ರಕಟವಾಗಿತ್ತು. ಈ ನಾಲ್ಕರಲ್ಲಿ 1999 ಹಾಗೂ 2014ರಲ್ಲಿ ಚುನಾವಣೋತ್ತರ ಸಮೀಕ್ಷೆ ನಿಜವಾಗಿತ್ತು. ಇದೇ ಕಾರಣಕ್ಕೆ ಯಾವ ಸುದ್ದಿ ವಾಹಿನಿ, ಸಂಸ್ಥೆ ನಿಖರ ಸಮೀಕ್ಷೆ ನೀಡುತ್ತೆ ಅನ್ನೋದು ಕುತೂಹಲ ಮೂಡಿಸಿದೆ.