Saturday, November 2, 2024

ಬಸ್​ ನಿಲ್ಲಿಸಿ ಓಡೋಡಿ ಹೋಗಿ ಮತ ಚಲಾಯಿಸಿದ ಚಾಲಕ..!

ಮಂಗಳೂರು: ರಜೆ ಇದ್ದರೂ ಮತದಾನ‌ ಮಾಡದೇ ಚುನಾವಣೆಯಿಂದ ದೂರ ಉಳಿಯುವ ಮತದಾರರ ನಡುವೆ ಮಂಗಳೂರಿನ ಖಾಸಗಿ ಬಸ್ಸು ಚಾಲಕರೊಬ್ಬರು ಮಾದರಿಯಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ನಡೆದಿದ್ದು, ಮಂಗಳೂರಿನ ಚಾಲಕರೊಬ್ಬರು ಬಸ್​ ನಿಲ್ಲಿಸಿ ಮತಚಲಾಯಿಸಿದ್ದಾರೆ. ಮತದಾನದ ಬಗ್ಗೆ ಸಾಕಷ್ಟು ಅರಿವು ಮೂಡಿಸಿದರೂ ಹಲವು ಕಡೆ ಶೇಕಡಾ ಮತದಾನ ಕಮ್ಮಿ ಇದೆ. ಮಂಗಳೂರಿನಲ್ಲಿ ಚಾಲಕರೊಬ್ಬರು ಬಸ್​​ ನಿಲ್ಲಿಸಿ, ಓಡೋಡಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿ ಮತ್ತೆ ಕರ್ತವ್ಯದಲ್ಲಿ ತೊಡಗಿದ್ದಾರೆ.

ಮಂಗಳೂರು- ಶಿವಮೊಗ್ಗ ಓಡಾಡುವ ಜಯರಾಜ್ ಹೆಸರಿನ ಖಾಸಗಿ ಬಸ್ಸು ಚಾಲಕನಾಗಿರುವ ವಿಜಯ್ ಶೆಟ್ಟಿ ಮೊನ್ನೆ ಬುಧವಾರ ಶಿವಮೊಗ್ಗಕ್ಕೆ ತೆರಳಿದ್ದರು. ಬಳಿಕ ನಿನ್ನೆ ಬೆಳಗ್ಗೆ ಶಿವಮೊಗ್ಗದಿಂದ ಹೊರಟ ಬಸ್ಸು ಬೆಳುವಾಯಿ ಬಳಿ ಬರುತ್ತಿದ್ದಂತೆ ಬಸ್​ ನಿಲ್ಲಿಸಿ ಓಡೋಡಿ ತನ್ನ ಮತಗಟ್ಟೆಗೆ ಹೋಗಿ ಮತಚಲಾಯಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿ ತಾಲೂಕಿನ ಬೆಳುವಾಯಿ ನಿವಾಸಿ ವಿಜಯ್ ಶೆಟ್ಟಿ ಬೆಳುವಾಯಿ ಮತಗಟ್ಟೆಯ ಬಳಿ ಬಸ್​ ನಿಲ್ಲಿಸಿದ ವಿಜಯ್​ ಶೆಟ್ಟಿ ಬೇಗನೆ ಹೋಗಿ ತಮ್ಮ ಹಕ್ಕು ಚಲಾಯಿಸಿ, ಪ್ರಯಾಣಿಕರಿಗೂ ತೊಂದರೆಯಾಗದಂತೆ ಮತ್ತೆ ಕರ್ತವ್ಯಕ್ಕೆ ಹಾಜರಾಗೋ ಮೂಲಕ ಇತರರಿಗೆ ಮಾದರಿಯಾದ್ರು.

ಮತದಾನ ಜವಾಬ್ದಾರಿ ಮೆರೆದ ಬಸ್​ ಚಾಲಕ ವಿಜಯ್​ ಶೆಟ್ಟಿ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ವೇಳೆ ಕೊನೆಯ ನಿಲ್ದಾಣವಾದ ಮಂಗಳೂರಿಗೆ ತೆರಳುತ್ತಿದ್ದರೆ, ವಿಜಯ್ ಶೆಟ್ಟಿ ಅವರು ಹಿಂತಿರುಗಿ ಬಂದು ಮತ ಚಲಾಯಿಸಲು ಅವಕಾಶ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ತಾನು ದುಡಿಯುತ್ತಿದ್ದ ಜಯರಾಜ್ ಮೋಟಾರ್ಸ್ ಸಂಸ್ಥೆಯ ಮಾಲಕರ ಗಮನಕ್ಕೆ ತಂದು ಮತಚಲಾಯಿಸಿ ತನ್ನ ಹಕ್ಕನ್ನು ಮೆರೆದಿದ್ದಾರೆ. ಸದ್ಯ ಇವರ ಈ ಮತದಾನದ ಪ್ರಜ್ಞೆಗಾಗಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ರಜೆ ಇದ್ದರೂ, ಮತಗಟ್ಟೆ ಹತ್ತಿರವಿದ್ದರೂ ಮತದಾನದಿಂದ ದೂರವುಳಿಯೋ ಮಹಾನಗರದ ಮಂದಿಗೂ ವಿಜಯ್ ಶೆಟ್ಟಿ ಮಾದರಿಯಾಗಿದ್ದಾರೆ.

RELATED ARTICLES

Related Articles

TRENDING ARTICLES