Sunday, December 22, 2024

ನಿಖಿಲ್, ಸುಮಲತಾ ಬೆಂಬಲಿಗರ ನಡುವೆ ಗಲಾಟೆ..!

ಮಂಡ್ಯ: ರಾಜ್ಯದಲ್ಲಿ ಮೊದಲನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ದೊಡ್ಡರಸಿನಕೆರೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಅಭಿಮಾನಿಗಳ ನಡುವೆ ಘರ್ಷಣೆ ನಡೆದಿದೆ.

ನಿಖಿಲ್ ಕುಮಾರಸ್ವಾಮಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆಂದು ಸುಮಲತಾ ಪರ ಬೆಂಬಲಿಗರು ಆರೋಪಿಸಿದ್ದಾರೆ. ಇದೇ ವಿಚಾರವಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರೂ ಹರಸಾಹಸಪಟ್ಟಿದ್ದಾರೆ.

ಸುಮಲತಾ ಅಂಬರೀಶ್ ಅವರು ದೊಡ್ಡರಸಿನಕೆರೆ ಮತಗಟ್ಟೆಗೆ 12.30ರ ವೇಳೆಗೆ ಮತಚಲಾಯಿಸಲು ಬಂದಿದ್ದರು. ಸುಮಲತಾ ಮತ ಚಲಾಯಿಸಿ ಹೊರಡುವ ಹೊತ್ತಿಗೆ ಸರಿಯಾಗಿ ಮೈತ್ರಿ ಅಭ್ಯರ್ಥಿ ನಿಖಿಲ್ ಅವರು ಸಚಿವ ಡಿ. ಸಿ. ತಮ್ಮಣ್ಣ ಹಾಗೂ ಬೆಂಬಲಿಗರೊಂದಿಗೆ ಮತಗಟ್ಟೆಗೆ ಆಗಮಿಸಿದ್ದರು. ಈ ಸಂದರ್ಭ ಕಾರ್ಯಕರ್ತರ ನಡುವೆ ಪರಸ್ಪರ ವಾಕ್ಸಮರ ನಡೆದಿದೆ. “ನಿಖಿಲ್ ಕುಮಾರಸ್ವಾಮಿ ಅವರದ್ದು ದೊಡ್ಡರಸಿನಕೆರೆ ಮತಗಟ್ಟೆಯಲ್ಲ. ಹಾಗಿರುವಾಗ ಅವರು ಇಷ್ಟು ಜನರೊಂದಿಗೆ ಮತಗಟ್ಟೆಯೊಳಗೆ ಯಾಕೆ ಹೋಗ್ತಾರೆ”? ಅಂತ ಸುಮಲತಾ ಬೆಂಬಲಿಗರು ಪ್ರಶ್ನಿಸಿದ್ದಾರೆ. ಡಿ. ಸಿ ತಮ್ಮಣ್ಣ ಅವರ ಜೊತೆ ಮತಗಟ್ಟೆಯೊಳಗೆ ಹೋಗಿರುವ ನಿಖಿಲ್ ಅವರು ತಮ್ಮಣ್ಣ ಅವರು ಹೊರಬಂದಾಗ ಅವರೊಂದಿಗೇ ಮತಗಟ್ಟೆಯಿಂದ ಹೊರಬಂದಿದ್ದಾರೆ.

“ಪ್ರಚಾರಕ್ಕೆ ಬರುತ್ತಿದ್ದಂತಹ ವಾಹನದಲ್ಲಿಯೇ ನಿಖಿಲ್ ಮತಗಟ್ಟೆಗೆ ಬಂದಿದ್ದರು. ದಿನವೂ ಪ್ರಚಾರಕ್ಕೆ ಬರುವಂತೆಯೇ ಹೆಚ್ಚಿನ ಸಂಖ್ಯೆಯ ಬೆಂಬಲಿಗರ ಜೊತೆ ನಿಖಿಲ್ ಬಂದಿದ್ದಾರೆ. ಹಾಗೆಯೇ ಅಭಿಮಾನಿಗಳಿಗೆ ಕೈ ಮುಗಿಯುತ್ತಲೇ ನಿಖಿಲ್ ಮತಗಟ್ಟೆಗೆ ಬಂದಿದ್ದು, ಪ್ರಚಾರ ಕಾರ್ಯಕ್ರಮದಂತೆಯೇ ಇತ್ತು. ಇದು ನೀತಿ ಸಂಹಿತೆ ಉಲ್ಲಂಘನೆ” ಅಂತ ಸುಮಲತಾ ಪರ ಬೆಂಬಲಿಗರು ಆರೋಪಿಸಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ಡಿ. ಸಿ ತಮ್ಮಣ್ಣ ಅವರು “ದೊಡ್ಡರಸಿನಕೆರೆಯಲ್ಲಿ ಗಲಾಟೆಯೇ ನಡೆದಿಲ್ಲ ಎಂದು ಪವರ್​ಟಿವಿಗೆ ಪ್ರತಿಕ್ರಿಯಿಸಿದ್ದಾರೆ. ಮಾರಾಮಾರಿ ನಡೆದಿದ್ರೂ ಏನೂ ಆಗಿಲ್ಲ ಎಂದಿರುವ ಸಚಿವರು ಅಲ್ಲೇನು ಲಾಠಿ ಚಾರ್ಜ್​ ನಡೆದಿದೆಯಾ ಅಂತ ಪ್ರಶ್ನಿಸಿದ್ದಾರೆ. ಮಾಧ್ಯಮಗಳಿಗೆ ಪಾಠ ಹೇಳಲು ಮುಂದಾದ ಡಿ.ಸಿ. ತಮ್ಮಣ್ಣ ಅವರು, ಜನರನ್ನು ನೋಡಿ ಕೈ ಮುಗಿದ್ರೆ ತಪ್ಪೇನು ಎಂದು ಪ್ರಶ್ನಿಸಿ, ನಿಖಿಲ್ ರೋಡ್​ ಶೋವನ್ನು ಸಮರ್ಥಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES