ಮಂಡ್ಯ : ಈ 4 ವಾರಗಳಲ್ಲಿ ಮಂಡ್ಯದ ಜನರಲ್ಲಿ ದೇವರನ್ನು ಕಂಡೆ ಎಂದು ಹೇಳಿದರು.
ಇಂದು ಮಂಡ್ಯದಲ್ಲಿ ಸ್ವಾಭಿಮಾನಿ ಸಮ್ಮಿಲನ ಸಮಾವೇಶದಲ್ಲಿ ಮಾತನಾಡಿದ ಅವ್ರು, ನಾನು ಮಂಡ್ಯ ಜನರಲ್ಲಿ ದೇವರನ್ನು ಕಂಡಿದ್ದೇನೆ. ಜೀವಕ್ಕಿಂತ ಹೆಚ್ಚು ಪ್ರೀತಿಸುವ ಅಂಬಿಯನ್ನು ಕಳೆದುಕೊಂಡ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ತುಂಬಿದ್ರಿ. ಇದು ದೇವರಿಂದ ಮಾತ್ರ ಸಾಧ್ಯ ಎಂದರು.
ಅಂಬರೀಶ್ ಎಲ್ಲಿಯೂ ಹೋಗಿಲ್ಲ, ನಿಮ್ಮಲ್ಲೇ ಇದ್ದಾರೆ. ರಾಜಕಾರಣದಲ್ಲಿ ರಾಕ್ಷಸತನವನ್ನೂ ನೋಡಿದ್ದೇನೆ. ಈ ಮಾತನ್ನು ಹೇಳಲು ಬಹಳ ಬೇಸರವಾಗುತ್ತೆ. ಚುನಾವಣೆಗೆ ಸ್ಪರ್ಧಿಸುವ ಮುಂಚೆ ಬಹಳ ಯೋಚಿಸಿದ್ದೆ. ಇದ್ರಿಂದ ಕೆಲ ಸ್ನೇಹ, ಸಂಬಂಧಗಳು ಹಾಳಾಗುತ್ತೆಂದು ಗೊತ್ತಿತ್ತು. ಆದ್ರೂ ಮಂಡ್ಯದ ಜನತೆ ಮುಂದೆ ಯಾವುದೂ ದೊಡ್ಡದಲ್ಲ. ನಿಮಗೋಸ್ಕರ ಬದುಕುವುದೇ ಹೆಚ್ಚು ಎಂದು ಸುಮ್ಮನಿದ್ದೆ. ನಾನು ಮೊದಲ ಹೆಜ್ಜೆ ಇಟ್ಟಾಗ ಒಬ್ಬಂಟಿಯಾಗಿದ್ದೆ. ನಂತರ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಕ್ಕೆ ನಿಂತರು. ಬಹಿರಂಗವಾಗಿ ಬೆಂಬಲಕ್ಕೆ ನಿಂತಿದ್ದಕ್ಕೆ ಪಕ್ಷದಿಂದ ಉಚ್ಚಾಟನೆ ಮಾಡಿದರು. ಆದ್ರೂ ನನ್ನ ಬೆಂಬಲಕ್ಕೆ ನಿಂತ ಎಲ್ರಿಗೂ ನಾನು ಆಭಾರಿ. ಅವರಿಗೆಲ್ಲ ನನ್ನ ಅನಂತ ಅನಂತ ಧನ್ಯವಾದಗಳು ಎಂದರು.
ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೇ ತಪ್ಪಾ? ಅಥವಾ ಅವರ ವಿರುದ್ಧ ಸ್ಪರ್ಧೆ ಮಾಡಿದ್ದೇ ತಪ್ಪಾ? ರೈತರು, ಮಹಿಳೆಯರು, ಸೈನಿಕರ ಬಗ್ಗೆ ಗೌರವವಿದ್ಯಾ? ಬರೀ ನಿಮ್ಮ ಕುಟುಂಬವನ್ನೇ ಅಭಿವೃದ್ಧಿ ಮಾಡುತ್ತಿದ್ದೀರಿ. ಬೇರೆಯವರ ಅಭಿವೃದ್ಧಿ ಬಗ್ಗೆ ನಿಮಗೆ ಕಾಳಜಿ ಇಲ್ವಾ? ನಾನು ಈ ಮಂಡ್ಯ ಮಣ್ಣಿನ ಸೊಸೆ. ಜನರ ಕಣ್ಣೀರು ಒರೆಸಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಅಂದು ನನ್ನ ಕಣ್ಣೀರಲ್ಲಿ ನೋವಿತ್ತು. ಈ ಕಣ್ಣೀರಲ್ಲಿ ಧೈರ್ಯವಿದೆ ಎಂದ ಅವರು, ಸೆರಗು ಹಿಡಿದು ಸ್ವಾಭಿಮಾನದ ಭಿಕ್ಷೆ ಹಾಕುವಿರಾ ಅಂತ ಮತಯಾಚನೆ ಮಾಡಿದರು.