ಬಳ್ಳಾರಿ: ಮನಸ್ಸಿದ್ದರೆ ಮಾರ್ಗ, ಕಲಿಯ ಬೇಕು, ಸಾಧಿಸಬೇಕು ಅನ್ನೋ ಹಂಬಲವಿದ್ದರೆ ಅಂದುಕೊಂಡಿದ್ದನ್ನು ಖಂಡಿತಾ ಸಾಧಿಸಬಹುದು. ಸಾಧನೆಗೆ ಬಡತನ ಎಂದೂ ಅಡ್ಡಿ ಆಗಲಾರದು ಅನ್ನೋದನ್ನು ಪ್ರೂವ್ ಮಾಡಿದ್ದಾರೆ ಕುಸುಮಾ ಉಜ್ಜಿನಿ.
ಬಳ್ಳಾರಿಯ ಕೊಟ್ಟೂರು ಪಟ್ಟಣದ ಇಂದು ಕಾಲೇಜಿನ ಕುಸುಮಾ ಉಜ್ಜಿನಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಟಾಪರ್..! ಬಡತನಕ್ಕೆ ಸೆಡ್ಡು ಹೊಡೆದು ಫಸ್ಟ್ ರ‍್ಯಾಂಕ್ ಬಂದಿರೋ ಈಕೆಯ ಬಗ್ಗೆ ಹೇಳಲೇ ಬೇಕು. ಯಾಕಂದ್ರೆ ಅದೆಷ್ಟೋ ಕನಸು ಕಂಗಳಿಗೆ ಈಕೆಯ ಯಶೋಗಾಥೆ ಸ್ಫೂರ್ತಿಯ ಸೆಲೆ.
ಕುಸುಮಾ ದೇವೆಂದ್ರಪ್ಪ ಅನ್ನೋರ ಮಗಳು. ದೇವೇಂದ್ರಪ್ಪ ಜೀವನೋಪಾಯಕ್ಕೆ ಒಂದು ಪುಟ್ಟ ಪಂಕ್ಚರ್ ಹಾಕೋ ಅಂಗಡಿಯನ್ನು ಇಟ್ಕೊಂಡಿದ್ದಾರೆ. ಕುಸುಮಾ ಕೂಡ ನಿತ್ಯ ಅಪ್ಪನ ಜೊತೆ ಪಂಕ್ಚರ್ ಹಾಕುತ್ತಾ, ಅಪ್ಪನಿಗೆ ಕೆಲಸದಲ್ಲಿ ನೆರವಾಗುತ್ತಲೇ ವಿದ್ಯಾಭ್ಯಾಸವನ್ನು ಮಾಡುತ್ತಿರುವ ವಿದ್ಯಾರ್ಥಿನಿ.
ಕೆಲಸದ ಜೊತೆ ಜೊತೆಗೇ ಕಷ್ಟಪಟ್ಟು ಓದಿ ಇವತ್ತು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೇ ಫಸ್ಟ್ ರ‍್ಯಾಂಕ್ (594 ಅಂಕ) ಬಂದಿದ್ದಾರೆ. ಈಕೆಗೆ ದೊಡ್ಡಮಟ್ಟಿನ ಯಶಸ್ಸು ಸಿಗಲಿ. ಎಲ್ಲೆಡೆ ಈಕೆಯ ಕೀರ್ತಿ ಪಸರಿಸಲಿ.
ಇನ್ನು ಕಳೆದ 4 ವರ್ಷದಿಂದ ಕಲಾ ವಿಭಾಗದಲ್ಲಿ ಕೊಟ್ಟೂರು ಪಟ್ಟಣದ ಇಂದು ಪಿಯುಸಿ ಕಾಲೇಜು ಮೊದಲ ಸ್ಥಾನ ಪಡೆಯುತ್ತಿದೆ. ಈ ಬಾರಿ ಕಲಾ ವಿಭಾಗದಲ್ಲಿ 9 ಮಂದಿ ಟಾಪರ್ಸ್‌ಗಳೂ ಇದೇ ಕಾಲೇಜಿನವರು ಎಂಬುದು ವಿಶೇಷ. ಕುಸುಮಾ ಉಜ್ಜಿನಿ 594 ಅಂಕ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಕ್ರಮವಾಗಿ ಹೊಸಮನಿ ಚಂದ್ರಪ್ಪ-591 ಅಂಕ, ನಾಗರಾಜ್ – 591 ಅಂಕ, ಓಮೇಶ್ – 591 ಅಂಕ, ಸಚಿನ್ ಕೆ.ಜಿ – 589 ಅಂಕ, ಸುರೇಶ್ ಹೆಚ್ – 589 ಅಂಕ, ಹರಿಜನ ಸೋಪ್ಪಿನ ಉಚ್ಚೆಂಗೆಮ್ಮ- 588 ಅಂಕ, ಕೋನಾಪುರ ಮಠದ ನಂದೀಶ್ – 588 ಅಂಕ, ಅಂಗಡಿ ಸರಸ್ವತಿ – 587 ಅಂಕ ಪಡೆದಿದ್ದಾರೆ.