ಬೆಂಗಳೂರು: ಟೀ ಇಂಡಿಯಾ ಮಾಜಿ ಕ್ಯಾಪ್ಟನ್, ಹಾಲಿ ಕಿರಿಯರ ತಂಡದ ಗುರು ರಾಹುಲ್ ದ್ರಾವಿಡ್ ಅವರು ಕರ್ನಾಟಕದಲ್ಲಿ ಚುನಾವಣಾ ರಾಯಭಾರಿ ಅನ್ನೋದು ಗೊತ್ತೇ ಇದೆ. ಆದರೆ ಈ ಬಾರಿ ಅವರು ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಯಾಕೆ ಗೊತ್ತಾ..? ಮತದಾರರ ಪಟ್ಟಿಯಲ್ಲಿ ದ್ರಾವಿಡ್ ಹೆಸರೇ ಇಲ್ಲ. ಕರ್ನಾಟಕ ಚುನಾವಣೆಯ ರಾಯಭಾರಿ ದ್ರಾವಿಡ್ ಎಪ್ರಿಲ್ 18ರಂದು ಮತ ಚಲಾಯಿಸುತ್ತಿಲ್ಲ. ಮನೆ ಬದಲಾಯಿಸುವ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ದ್ರಾವಿಡ್ ಹೆಸರು ತೆಗೆದು ಹಾಕಲಾಗಿದೆ. ಆದರೆ ಇಲ್ಲಿಯವರೆಗೂ ಪುನಃ ಹೆಸರನ್ನು ಸೇರಿಸದಿರುವುದಿಂದ ಅವರು ಮತ ಚಲಾಯಿಸುವ ಅವಕಾಶ ಕಳೆದುಕೊಂಡಿದ್ದಾರೆ.
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಇಂದಿರಾನಗರದಲ್ಲಿ ದ್ರಾವಿಡ್ ವಾಸವಿದ್ದರು. ಆರ್ಎಂವಿ ಎಕ್ಸ್ಟೆನ್ಷನ್ ಅಶ್ವತ್ಥ ನಗರಕ್ಕೆ ಮನೆ ಬದಲಿಸಿದ್ದ ದ್ರಾವಿಡ್ ಅವರು ಇಂದಿರಾನಗರದಲ್ಲಿ ಮತದ ಹಕ್ಕುರದ್ದತಿಗೆ ಅರ್ಜಿ ಸಲ್ಲಿಸಿದ್ರು. ಮತ್ತಿಕೆರೆ ಸಬ್ ಡಿವಿಷನ್ನಲ್ಲಿ ಮತಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದರೂ ನಿಗದಿತ ಸಮಯದಲ್ಲಿ ಸಲ್ಲಿಸದಿರುವುದರಿಂದ ಮತ ಚಲಾಯಿಸುವ ಅವಕಾಶ ಕಳೆದುಕೊಂಡಿದ್ದಾರೆ.
ರಾಹುಲ್ ದ್ರಾವಿಡ್ ಅವರು ಪ್ರತಿ ಬಾರಿಯೂ ತಪ್ಪದೆ ಮತ ಚಲಾಯಿಸುತ್ತಿದ್ದರು. ಹಾಗಾಗಿ ಅವರನ್ನು ಮತ ಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯಾಗಿ ಆಯ್ಕೆ ಮಾಡಿದೆವು. ಇನ್ನು ಪಕ್ಷಗಳ ವಿಚಾರದಲ್ಲಿಯೂ ಅವರು ತಟಸ್ಥ ನಿಲುವುಗಳಳ್ಳ ವ್ಯಕ್ತಿಯಾಗಿದ್ದು, ಒಬ್ಬ ಸೆಲೆಬ್ರಿಟಿಯೂ ಹೌದು. ಈ ಬಾರಿ ಅವರು ಮತ ಚಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದು ಅಚ್ಚರಿಯಾಯಿತು ಅಂತ ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.